ಪುತ್ತೂರು: ಶಿಕ್ಷಣ ನೀತಿ ಕೇವಲ ಶಿಕ್ಷಣ ವ್ಯವಸ್ಥೆಯನ್ನು ಬದಲಿಸುವ ಕಾನೂನು ಅಲ್ಲ. ಇದು ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಬದಲಿಸುವ ಮಾರ್ಗಸೂಚಿಯೂ ಹೌದು. ಹೊಸ ಪೀಳಿಗೆಯ ಮಕ್ಕಳ ಭವಿಷ್ಯ ಹೇಗಿರಬೇಕೆಂಬ ದೂರದೃಷ್ಟಿಯನ್ನು ಇಟ್ಟುಕೊಂಡು ರಚಿಸಿರುವ ನೀಲ ನಕ್ಷೆ. ಈ ಮೂಲಕ ಭಾರತೀಯ ಹೊಸ ಶಿಕ್ಷಣ ನೀತಿಯು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ನೀಡುತ್ತದೆ ಎಂದು ಖ್ಯಾತ ಅಂಕಣಗಾರ ರೋಹಿತ್ ಚಕ್ರತೀರ್ಥ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಿಗೆ ಆಯೋಜಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಣವನ್ನು ಕೇವಲ ಜ್ಞಾನ ಸಂಪಾದನೆಗೆ ಮಿತಿಗೊಳಿಸಲು ಸಾಧ್ಯವಿಲ್ಲ. ಬದುಕಲು ಕಲಿಸುವುದು ಶಿಕ್ಷಣದ ಉದ್ದೇಶ ವಾಗಬೇಕು. ಕೌಶಲ್ಯ ಅಥವಾ ಇತರ ವಿಷಯಗಳ ಜ್ಞಾನವಿಲ್ಲದಿದ್ದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೋಲುವ ಅಪಾಯವಿದೆ. ಹೊಸ ನೀತಿಯು ಕೌಶಲ್ಯಾಭಿವೃದ್ಧಿಯನ್ನು ಶಿಕ್ಷಣ ವ್ಯವಸ್ಥೆಗೆ ಅಳವಡಿಸುತ್ತದೆ. ಇದರಲ್ಲಿ ಪ್ರಾಥಮಿಕ ಹಂತದಿಂದಲೇ ತಾಂತ್ರಿಕ ಮತ್ತು ವೃತ್ತಿಪರ ಕೌಶಲ್ಯಾಭಿವೃದ್ಧಿಗೆ ಅವಕಾಶ ದೊರೆಯಲಿದೆ. ಇಂಗ್ಲಿಷ್ ವ್ಯಾಮೋಹದಿಂದ ಮಾತೃಭಾಷೆಯ ಕಡೆಗಣನೆಯಾಗಿರುವ ಈ ಕಾಲದಲ್ಲಿ ಮಾತೃಭಾಷೆಗೆ ಒತ್ತು ನೀಡುವ ಶಿಕ್ಷಣ ನೀತಿ ಸಕಾಲಿಕವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ರವಿ ಮುಂಗ್ಲಿಮನೆ ಮಾತನಾಡಿ ಹೊಸ ಶಿಕ್ಷಣ ನೀತಿಯು ಯುವಜನರನ್ನು ಒಂದಕ್ಕೇ ಸೀಮಿತಗೊಳಿಸದೆ ಹಲವಾರು ಅಂಶಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ. ಈ ರೀತಿಯ ಅವಕಾಶ ಸೃಷ್ಟಿಸುವ ಶಿಕ್ಷಣ ನೀತಿಯನ್ನು ಹುಟ್ಟುಹಾಕಬೇಕೆಂಬುದು ಹಲವಾರು ವರ್ಷಗಳ ಕನಸಾಗಿದೆ. ಆದ್ದರಿಂದಲೇ ಭವಿಷ್ಯದಲ್ಲಿ ದೇಶದ ಉದ್ಯೋಗ ಕ್ಷೇತ್ರ ಹೇಗಿರಲಿದೆ ಎಂಬ ದೂರದೃಷ್ಟಿಯನ್ನು ಇಟ್ಟುಕೊಂಡು ನೀತಿ ರಚಿಸಲಾಗಿದೆ. ಹೊಸ ಶಿಕ್ಷಣ ನೀತಿಯಿಂದ ರಾಜ್ಯದ ಮತ್ತು ದೇಶದ ಭವ್ಯ ಪರಂಪರೆ ಪ್ರಕಾಶಿಸಲಿದೆ ಎಂದರು.
ಸಮಾರಂಭದಲ್ಲಿ ಕಲ್ಲಡ್ಕದ ಶ್ರೀರಾಮ ವಿದ್ಯಾಲಯದ ಶಿಕ್ಷಕ ವಿನೋದ್ ಕಲ್ಲಡ್ಕ ಉಪಸ್ಥಿತರಿದ್ದರು. ವಿವೇಕಾನಂದ ಪದವಿಪೂರ್ವ ಕಾಲೇಜು ಮತ್ತು ನರೇಂದ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ಯಶಸ್ ಸಂಸ್ಥೆಯ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಉಪನ್ಯಾಸಕ ವಿಘ್ನೇಶ್ ಸ್ವಾಗತಿಸಿ ಪ್ರಾಂಶುಪಾಲ ಮಹೇಶ ನಿಟಿಲಾಪುರ ವಂದಿಸಿದರು.