ಕಳೆದ ಶುಕ್ರವಾರ ಸಿಕ್ಕ ಅಶುಭ ಸುದ್ದಿ, ಅಭಿಮಾನಿ ದೇವರುಗಳ ಕರುಳನ್ನ ಮತ್ತೆ ಮತ್ತೆ ಹಿಂಡುತ್ತಿದೆ. ಕಣ್ಣೀರಿನ ಸುನಾಮಿಯಲ್ಲೇ ಸಿಲುಕಿಕೊಂಡ ಭಾಗ್ಯವಂತನ ಆರಾಧಕರು ಸಾವಿನ ಕದ ತಟ್ಟುತ್ತಿದ್ದಾರೆ. ದೊಡ್ಮನೆಯ ಸಹೋದರರು ಮಾಡಿದ್ದ ಮನವಿಯನ್ನೂ ಲೆಕ್ಕಿಸದೇ ಮೃತ್ಯುಕೂಪಕ್ಕೆ ಶರಣಾಗ್ತಿದಾರೆ.
ಸೂಸೈಡ್ ಮಾಡ್ಕೋಬೇಡಿ ಪ್ಲೀಸ್ ಅಂತಾ ಶಿವಣ್ಣ ಕೈಮುಗಿದ್ರೂ ಅಭಿಮಾನಿಗಳು ಕೇಳ್ತಾ ಇಲ್ಲ. ನಮಗೆ ಮತ್ತಷ್ಟು ನೋವು ಕೊಡ್ಬೇಡಿ ಅಂತಾ ರಾಘಣ್ಣ ರಿಕ್ವೆಸ್ಟ್ ಮಾಡಿಕೊಂಡ್ರೂ ಸುಮ್ಮನಾಗ್ತಿಲ್ಲ. ದೊಡ್ಮನೆಯ ಸಹೋದರರ ಮಾತನ್ನೂ ಲೆಕ್ಕಿಸದೇ, ಪರಮಾತ್ಮನನ್ನೇ ಹಿಂಬಾಲಿಸಲು ಅಪ್ಪು ಅಭಿಮಾನಿಗಳು ಮುಂದಾಗ್ತಿದ್ದಾರೆ.
ಅಪ್ಪು ಇಂದು ನಮ್ಮೊಂದಿಗಿದ್ದರೆ ಇಂತಹ ಸುದ್ದಿಯನ್ನು ಕೇಳಿ ಖಂಡಿತ ಸಹಿಸಿಕೊಳ್ತಿರಲಿಲ್ಲ. ಶಿವಣ್ಣ ಕೂಡ ಹೇಳಿದ್ದು ಇದನ್ನೇ. ಆದ್ರೆ ಕಳೆದೊಂದು ವಾರದಿಂದ ಬೇಸರದ ರಾಟೆ ಎದೆಯಲ್ಲಿ ತಿರುಗಿದ್ದ್ರಿಂದ, ತಿರುಗುವ ಈ ಭೂಮಿಯನ್ನೇ ಹಲವು ಅಭಿಮಾನಿಗಳು ತೊರೆಯುತ್ತಿದ್ದಾರೆ.
ಅಪ್ಪು ನಿಧನದಿಂದ ಆಘಾತಕ್ಕೆ ಒಳಗಾಗಿದ್ದ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಭೀಮನಗರದ 31 ವರ್ಷದ ಶಿವಮೂರ್ತಿ ಎಂಬವರು ಅನ್ನಾಹಾರ ತ್ಯಜಿಸಿದ್ದರು. ಅಪ್ಪು ಜೊತೆ ತೆಗೆಸಿಕೊಂಡಿದ್ದ ಫೋಟೋವನ್ನೇ ನೋಡಿ ಪ್ರತಿದಿನ ಕಣ್ಣೀರು ಹಾಕ್ತಿದ್ದರು. ಕಳೆದೊಂದು ವಾರದಿಂದ ಏನೂ ತಿನ್ನದೇ ಆರೋಗ್ಯ ಕೆಡಿಸಿಕೊಂಡಿದ್ದ ಶಿವಮೂರ್ತಿ, ನಿನ್ನೆ ರಾತ್ರಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ, ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಕಲ್ಪತರು ನಾಡಲ್ಲಿ ಮತ್ತೋರ್ವ ಅಭಿಮಾನಿ ಸಾವು
ಇನ್ನು, ತುಮಕೂರು ತಾಲೂಕಿನ ಅರೆಗುಜ್ಜನಹಳ್ಳಿಯ 27 ವರ್ಷದ ರವಿಕುಮಾರ್ ಅಪ್ಪುರವರವ ಡೈ ಹಾರ್ಡ್ ಫ್ಯಾನ್. ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಊಟ ತಿಂಡಿ ಬಿಟ್ಟು ಪವರ್ ಸ್ಟಾರ್ ನೆನಪಲ್ಲೇ ಕೊರಗಿದ್ದರು. ಕೊನೆಗೆ ಆರೋಗ್ಯ ಕ್ಷೀಣಿಸಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ.
ಅಭಿಮಾನವೋ ಅಂಧಾಭಿಮಾನವೋ..? ಏನ್ ಹೇಳೋದು ಅಂತಾನೇ ಗೊತ್ತಾಗ್ತಿಲ್ಲ. ರಾಜ್ಯದಲ್ಲಿ ಆತ್ಮಹತ್ಯೆ, ಹೃದಯಾಘಾತ ಹಾಗೂ ಅನ್ನಾಹಾರ ತ್ಯಜಿಸಿ ಮೃತಪಟ್ಟ ಅಪ್ಪು ಅಭಿಮಾನಿಗಳ ಸಂಖ್ಯೆ 14ಕ್ಕೂ ಮೀರಿದೆ. ಒಂದ್ಕಡೆ ಅಭಿಮಾನಿಗಳಿಗೆ ದುಃಖದಲ್ಲೇ ಧೈರ್ಯ ತುಂಬುವ ಕೆಲಸವನ್ನು ದೊಡ್ಮನೆ ಮಾಡ್ತಿದೆ. ಆದ್ರೆ, ಅಭಿಮಾನಿ ದೇವರುಗಳು ಅಂತಾ ಕರೆಸಿಕೊಂಡವರು, ದುಡುಕಿನ ನಿರ್ಧಾರ ಕೈಗೊಂಡ್ರೆ, ಸ್ವರ್ಗದಲ್ಲಿರುವ ಅಪ್ಪು ಮಂದಹಾಸದಲ್ಲಿರಲು ಸಾಧ್ಯವುಂಟೇ..? ಇನ್ನಾದ್ರೂ ಅಭಿಮಾನಿಗಳು ಎಚ್ಚೆತ್ತುಕೊಂಡು ಅಪ್ಪು ತೋರಿಸಿಕೊಟ್ಟ ಆದರ್ಶದಲ್ಲಿ ಹೆಜ್ಜೆಹಾಕಿದ್ರೆ, ಯುವರತ್ನನ ಆತ್ಮಕ್ಕೂ ಶಾಂತಿ ಸಿಗಲು ಸಾಧ್ಯ.