ಮೂಡುಬಿದಿರೆ: ತೋಟದಲ್ಲಿ ಮೇಯಲು ಕಟ್ಟಿಹಾಕಿದ್ದ ದನವನ್ನು ಕದ್ದೊಯ್ದು ಮಾರಾಟಕ್ಕೆ ಯತ್ನಿಸಿದ ಆರೋಪದಲ್ಲಿ ಮೂವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶಿರ್ತಾಡಿಯಲ್ಲಿ ನಡೆದಿದೆ.
ಪವನ್ ಕುಮಾರ್, ಸತೀಶ್ ಹಾಗೂ ಜಯಾನಂದ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿ ಗಿರೀಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಳಿಯೂರಿನ ಗಣೇಶ್ ಎಂಬವರ ಮನೆಯ ತೋಟದಲ್ಲಿ ಮೂರು ದಿನಗಳ ಹಿಂದೆ ಮೇಯಲು ಕಟ್ಟಿದ್ದ ದನ ಕಳವಾಗಿತ್ತು. ಶನಿವಾರ ಅದೇ ದನವನ್ನು ಈ ನಾಲ್ವರು ಆರೋಪಿಗಳು ಮಾರಾಟ ಮಾಡುವ ಉದ್ದೇಶದಿಂದ ಟೆಂಪೊದಲ್ಲಿ ಕೊಂಡೊಯ್ಯುತ್ತಿರುವುದನ್ನು ಸ್ಥಳೀಯುರು ಗಮನಿಸಿದ್ದಾರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಶಿರ್ತಾಡಿ ಸೇತುವೆಯ ಬಳಿ ಟೆಂಪೋವನ್ನು ತಡೆದು ನಿಲ್ಲಿಸಿದ ಸಾರ್ವಜನಿಕರು ವಿಚಾರಿಸಿದಾಗ ಆರೋಪಿಗಳು ಸುಳ್ಳು ಮಾಹಿತಿ ನೀಡಿದ್ದಾರೆ. ಈ ವೇಳೆ ಅಳಿಯೂರಿನ ಗಣೇಶ್ ಸ್ಥಳಕ್ಕಾಗಮಿಸಿ ಅದು ತಮ್ಮ ಮನೆಯ ಹಸುವೆಂದು ಖಚಿತಪಡಿಸಿದರು. ಬಳಿಕ ಸಾರ್ವಜನಿಕರು ಆರೋಪಿಗಳ ಪೈಕಿ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.