ಮಂಗಳೂರು: ಪದ್ಮಶ್ರೀ ಪುರಸ್ಕೃತ ‘ಅಕ್ಷರ ಸಂತ’ ಹರೇಕಳ ಹಾಜಬ್ಬರ ಕನಸಿನ ಶಾಲೆ ನೋಡಲು ಮತ್ತೋರ್ವ ಪದ್ಮಶ್ರೀ ಪುರಸ್ಕೃತೆ ‘ವೃಕ್ಷಮಾತೆ’ ತುಳಸೀ ಗೌಡ ಇಂದು ಬೆಳಗ್ಗೆ ಭೇಟಿ ನೀಡಿದರು.
ಮೊದಲು ನ್ಯೂಪಡ್ಪುವಿನಲ್ಲಿರುವ ಹಾಜಬ್ಬರ ಮನೆಗೆ, ನಂತರ ಹಾಜಬ್ಬರ ಶಾಲೆಗೆ ತನ್ನ ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ಭೇಟಿ ನೀಡಿದ ತುಳಸಿ ಗೌಡರನ್ನು ಹಾಜಬ್ಬ ಸ್ವಾಗತಿಸಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಹಾಜಬ್ಬ, ಪದ್ಮಶ್ರೀ ಪುರಸ್ಕೃತ ತುಳಸೀ ಗೌಡ ಅವರು ಈ ಬಡವನ ಮನೆಗೆ ಭೇಟಿ ನೀಡಿರುವುದು ನನ್ನ ಪುಣ್ಯ. ಮೊನ್ನೆ ಭೇಟಿಯಾದರೂ ಮಾತುಕತೆಗೆ ಸರಿಯಾದ ಅವಕಾಶ ದೊರೆತಿರಲಿಲ್ಲ. ಇದೀಗ ನನ್ನ ಮನೆಗೇ ಈ ಅಮ್ಮ ಬಂದಿರುವುದು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಪದ್ಮಶ್ರೀ ತುಳಸೀ ಗೌಡ ಮಾತನಾಡಿ, ಹಾಜಬ್ಬರನ್ನು ಮೊನ್ನೆ ಸರಿಯಾಗಿ ಭೇಟಿಯಾಗಲು ಸಾಧ್ಯವಾಗದೆ ಅವರನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದ್ದೇನೆ. ಹಾಜಬ್ಬರ ಶಾಲೆಯ ಅಭಿವೃದ್ಧಿಗೆ ನನ್ನಲ್ಲಿ ಆದಂತಹ ಸಹಕಾರವನ್ನು ನೀಡುತ್ತೇನೆ. ನೀವೆಲ್ಲರೂ ಅವರ ಕನಸಿಗೆ ಸಹಕರಿಸಿ ಎಂದು ಹೇಳಿದರು.
ಪದ್ಮಶ್ರೀ ತುಳಸೀ ಗೌಡ ಅವರು ಬಳಿಕ ಹಾಜಬ್ಬರ ಶಾಲೆಗೂ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿಗಳು ಸ್ವಾಗತಿಸಿದರು.