ಪುತ್ತೂರು: ರೋಟರಿ ಜಿಲ್ಲೆ 3181 ವಲಯ ಐದರ ರೋಟರಿ ಕ್ಲಬ್ ಪುತ್ತೂರು ರೋಟರಿ ಕ್ಲಬ್ ಪುತ್ತೂರು ಯುವ, ಕಲ್ಲಾರೆ ಡಾ.ನಝೀರ್ ಡಯಾಬಿಟಿಸ್ ಸೆಂಟರ್, ಇನ್ನರ್‌ವೀಲ್ ಕ್ಲಬ್ ಪುತ್ತೂರು, ರೋಟರಾಕ್ಟ್ ಕ್ಲಬ್ ಪುತ್ತೂರು, ರೋಟರಾಕ್ಟ್ ಕ್ಲಬ್ ಪುತ್ತೂರು ಸ್ವರ್ಣ, ರೋಟರಾಕ್ಟ್ ಕ್ಲಬ್ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ರೋಟರಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಇವುಗಳ ಸಹಭಾಗಿತ್ವದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ವಾಕಥಾನ್, ಉಚಿತ ಮಧುಮೇಹ ತಪಾಸಣೆ ಮತ್ತು ಮಾಹಿತಿ ಶಿಬಿರವು ನ.14 ರಂದು ಬೆಳಿಗ್ಗೆ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ಜರಗಲಿದೆ.
ಶಾಸಕ ಸಂಜೀವ ಮಠಂದೂರು ರವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ವಿಶ್ವ ಮಧುಮೇಹ ದಿನದ ಅಂಗವಾಗಿ ಬ್ಲಡ್‌ಬ್ಯಾಂಕ್ ಬಳಿಯಿಂದ ವಾಕಥಾನ್ ಜಾಥಾವು ಹೊರಟು ಕೆಎಸ್ಆರ್ ಟಿಸಿ ಬಸ್‌ಸ್ಟಾಂಡ್ ತನಕ ಹೋಗಿ ಪುನಃ ಬ್ಲಡ್ ಬ್ಯಾಂಕ್ ಬಳಿ ಹಿಂದಿರುಗುವುದು, ವಾಕಥಾನ್ ಟೀ-ಶರ್ಟ್‌ಗಳನ್ನು ಪಡೆಯಲು ವಾಕಥಾನ್‌ಗೆ ನೋಂದಾಯಿಸಿಕೊಳ್ಳತಕ್ಕದ್ದು. ಧನ್ವಂತರಿ ಕ್ಲಿನಿಕಲ್ ಲ್ಯಾಬಿನ ವತಿಯಿಂದ ಅದೇ ದಿನ ಎಲ್ಲಾ ರಕ್ತ ಪರೀಕ್ಷೆಗಳನ್ನು ಶೇ.25 ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು.
ಈ ಸಂದರ್ಭದಲ್ಲಿ ಆಗಮಿಸುವವರಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವಿವಿಧ ಸಂಘ-ಸಂಸ್ಥೆಗಳ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ -ಮಕ್ಕಳ ಸಮ್ಮಿಲನ:
ಮಧುಮೇಹಿ ಮಕ್ಕಳಿಗೆ ನೆರವಾಗಲು ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ (ರೋಟರಿ ಪುತ್ತೂರು ಡಯಾಬಿಟಿಕ್ ಚಿಲ್ಡ್ರನ್ ಕೇರ್ ಸೆಂಟರ್) ಎಂಬ ಯೋಜನೆಯನ್ನು ರೋಟರಿ ಕ್ಲಬ್ ಪುತ್ತೂರು ವತಿಯಿಂದ ಡಾ.ನಝೀರ್ ಡಯಾಬಿಟೆಕ್ ಸೆಂಟರ್ ಮತ್ತು ಇಡಿಆರ್‌ಟಿ ಬೆಂಗಳೂರು ಇವರ ಸಹಯೋಗದೊಂದಿಗೆ ಈಗಾಗಲೇ ರೂಪುಗೊಳಿಸಲಾಗಿದೆ.
ಈ ಯೋಜನೆಯು ಮಕ್ಕಳಿಗೆ ವೈದ್ಯಕೀಯ ನೆರವು, ಅವಶ್ಯಕ ವೈದ್ಯಕೀಯ ಉಪಕರಣಗಳು, ಔಷಧ ವಿತರಿಸುವ ಮತ್ತು ಅವಶ್ಯಕತೆ ಇರುವವರಿಗೆ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಒದಗಿಸುವ ಮತ್ತು ಟೈಪ್ 1 ಡಯಾಬಿಟೀಸ್ ರೋಗ ಮತ್ತು ಅದರ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿ ಮಕ್ಕಳು ಮತ್ತು ಪೋಷಕರ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
ನ.14 ರಂದು ಆಚರಿಸುವ ಮಕ್ಕಳ ದಿನಾಚರಣೆಯ ಅಂಗವಾಗಿ ಪ್ರಾಜೆಕ್ಟ್ ಸ್ವೀಟ್ ಚೈಲ್ಡ್-ಮಕ್ಕಳ ಸಮ್ಮಿಲನವನ್ನು ಹಮ್ಮಿಕೊಳ್ಳಲಾಗಿದ್ದು, ಶಾಲಾ ಕಾಲೇಜುಗಳಲ್ಲಿ ಟೈಪ್-1 ಮಧುಮೇಹದ ಬಗೆಗಿನ ಮಾಹಿತಿ ಶಿಬಿರವನ್ನು ಈ ಸಂದರ್ಭದಲ್ಲಿ ನಡೆಸಲಾಗುತ್ತಿದೆ.