ಮೆಟಾ (Meta) ಒಡೆತನದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆ್ಯಪ್ (WhatsApp) ಈಗೀಗ ಬಳಕೆದಾರರಿಗೆ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಿದೆ. ಮುಖ್ಯವಾಗಿ ಪ್ರೈವಸಿಗೆ ಸಂಬಂಧ ಪಟ್ಟಂತೆ ಉಪಯುಕ್ತ ಫೀಚರ್ಗಳನ್ನು ನೀಡುತ್ತಿರುವ ವಾಟ್ಸ್ಆ್ಯಪ್ನಲ್ಲಿ ವಿಶೇಷ ವೈಶಿಷ್ಟ್ಯವೆಂದರೆ ಅದು ‘ಲಾಸ್ಟ್ ಸೀನ್’ (WhatsApp Last Seen). ಈ ಫೀಚರ್ ಪ್ರತಿಯೊಬ್ಬ ಬಳಕೆದಾರರು ಯಾವಾಗ ಕೊನೆಯದಾಗಿ ವಾಟ್ಸ್‌ಆ್ಯಪ್ ತೆರೆದು ನೋಡಿದ್ದಾರೆ ಎಂಬುದನ್ನು ತಿಳಿಸುತ್ತದೆ. ಇದರಲ್ಲಿ Everyone, My Contacts ಮತ್ತು Nobody ಎಂಬ ಆಯ್ಕೆಗಳೂ ಕೂಡ ಇದೆ. ಸದ್ಯ ಇದಕ್ಕೆ ಈಗ ಮತ್ತೊಂದು ಹೊಸ ಫೀಚರ್ ಸೇರ್ಪಡೆಯಾಗುತ್ತಿದೆ.
ಹೌದು, ವಾಟ್ಸ್‌ಆ್ಯಪ್ ಸಂಸ್ಥೆಯು ಬಳಕೆದಾರರಿಗೆ ನಿರ್ದಿಷ್ಟ ಸಂಪರ್ಕ ಸಂಖ್ಯೆಗೆ ಲಾಸ್ಟ್ ಸೀನ್ ಕಾಣದಂತೆ ಮಾಡುವ ಆಯ್ಕೆ ಅಳವಡಿಸಲು ಸಜ್ಜಾಗಿದೆ ಎಂದು WABetaInfo ವರದಿ ಮಾಡಿದೆ. ಅಂದರೆ ವಾಟ್ಸ್‌ಆ್ಯಪ್ ಬಳಕೆದಾರರು ತಮ್ಮ ಲಾಸ್ಟ್ ಸೀನ್ ಅನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ತೋರಿಸದೇ ಇರುವಂತಹ ಆಯ್ಕೆ ಇದಾಗಿರಲಿದೆ. ಇದರಿಂದಾಗಿ ಬಳಕೆದಾರರು ಬಯಸಿದ ವ್ಯಕ್ತಿಗಳಿಗೆ ಮಾತ್ರವೇ ಲಾಸ್ಟ್ ಸೀನ್ ಕಾಣಿಸಲಿದೆ.
ಈಗಾಗಲೇ ಲಾಸ್ಟ್ ಸೀನ್ ಹೈಡ್ ಆಯ್ಕೆಯನ್ನು ಪರೀಕ್ಷಾರ್ಥವಾಗಿ ಬೀಟಾ ಆವೃತ್ತಿಯಲ್ಲಿ ಬಳಸುತ್ತಿದೆ. ಬೀಟಾ ಆವೃತ್ತಿ ಪರಿಶೀಲನೆಯ ಬಳಿಕ ಬಳಕೆದಾರರಿಗೆ ಹೊಸ ಆಯ್ಕೆ ಲಭ್ಯವಾಗಲಿದೆ. ಇದರಿಂದ “ನೀವು ವಾಟ್ಸ್ಆ್ಯಪ್ನಲ್ಲಿ ಆನ್‌ಲೈನ್‌ನಲ್ಲಿರುವುದನ್ನು ನಾನು ನೋಡಿದೆ” ಎಂಬಂತಹ ಕಾಮೆಂಟ್‌ಗಳಿಂದ ಸುರಕ್ಷಿತವಾಗಿರಬಹುದಾಗಿದೆ. ಈ ಮೊದಲು ಆಯ್ಕೆ ಇಲ್ಲದಿದ್ದರಿಂದ ಬಳಕೆದಾರರಿಗೆ ಆಗುತ್ತಿದ್ದ ತೊಂದರೆಯು ಈ ಮೂಲಕ ಕೊನೆಗೊಳ್ಳಲಿದೆ.
ಇತ್ತೀಚೆಗಷ್ಟೆ ವಾಟ್ಸ್‌ಆ್ಯಪ್ ತನ್ನ ವೆಬ್ ಬಳಕೆದಾರರಿಗಾಗಿ ಮಲ್ಟಿ ಡಿವೈಸ್ ವೈಶಿಷ್ಟ್ಯವನ್ನು ಹೊರತಂದಿತ್ತು.ಈ ಮೂಲಕ ವಾಟ್ಸ್‌ಆ್ಯಪ್ ವೆಬ್ಗಾಗಿ ನೀವು ಸ್ಮಾರ್ಟ್ಫೋನ್ ಅನ್ನು ಆನ್ಲೈನ್ನಲ್ಲಿ ಇರಿಸುವ ಅಗತ್ಯವಿಲ್ಲ. ಈ ಹಿಂದೆ ವಾಟ್ಸ್‌ಆ್ಯಪ್ ವೆಬ್ ಬಳಸಬೇಕಾದರೆ ಪ್ರತಿ ಬಾರಿ ನಿಮ್ಮ ಫೋನ್‌ನೊಂದಿಗೆ ಲಾಗಿನ್ ಮಾಡಬೇಕಾಗಿತ್ತು. ಬೀಟಾ ಪ್ರೋಗ್ರಾಂನಿಂದ ಹೊರಬರುವ ಮಲ್ಟಿ-ಡಿವೈಸ್ ವೈಶಿಷ್ಟ್ಯದಿಂದ ಸ್ಮಾರ್ಟ್ಫೋನ್ ಸಹಾಯವಿಲ್ಲದೆ ಲಾಗಿನ್ ಆಗಬಹುದಾಗಿದೆ.
ವಾಟ್ಸ್‌ಆ್ಯಪ್ ಪರಿಚಯಿಸಿರುವ ಮಲ್ಟಿ ಡಿವೈಸ್ ಮೂಲಕ ಒಬ್ಬರು ಒಂದೇ ಸಮಯದಲ್ಲಿ ತಮ್ಮ ವಾಟ್ಸ್‌ಆ್ಯಪ್ ಅಕೌಂಟ್ ಅನ್ನು ನಾಲ್ಕು ಡಿವೈಸ್‌ಗಳಿಗೆ ಲಿಂಕ್ ಮಾಡಲು ಅವಕಾಶ ನೀಡಲಿದೆ. ಇದರಲ್ಲಿ ಬ್ರೌಸರ್ ಮತ್ತು ಇತರ ಡಿವೈಸ್‌ಗಳು ಕೂಡ ಸಾಧನಗಳು ಸೇರಿವೆ. ಇನ್ನು ಈ ಫೀಚರ್ಸ್ ಕೂಡ ಎಂಡ್ ಎಂಡ್ ಎನ್‌ಕ್ರಿಪ್ಶನ್ ಅನ್ನು ಬೆಂಬಲಿಸಲಿದೆ. ಇದರಿಂದ ನೀವು ಯಾವುದೇ ಡಿವೈಸ್‌ಗೆ ಕನೆಕ್ಟ್ ಮಾಡಿ ಚಾಟ್ ಮಾಡಿದರೂ ಸಹ ನಿಮ್ಮ ಚಾಟ್ ಸುರಕ್ಷಿತವಾಗಿರಲಿದೆ ಎಂದು ವಾಟ್ಸ್‌ಆ್ಯಪ್ ದೃಢಪಡಿಸಿದೆ.




























