ವಿಟ್ಲ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಹಳೀರಾದಲ್ಲಿ ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ೨೦ರಿಂದ ೩೦ ಜನರ ಮೇಲೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಸೂರಿಕುಮೇರಿ ನಿವಾಸಿ ಮಹಮ್ಮದ್ ಹನೀಫ್ (೪೩), ಹಳಿರಾ ನಿವಾಸಿ ಜಗದೀಶ್ (೨೫) ಬಂಧಿತರು.
ನ.೧೨ರಂದು ಬೆಂಗಳೂರು ಕಡೆಯ ಶಿಫ್ಟ್ ಕಾರು ಹಾಗೂ ಉಪ್ಪಿನಂಗಡಿ ಕಡೆಯ ಇನ್ನೋವಾ ನಡುವೆ ಅಪಘಾತವಾಗಿ, ಸ್ಥಳದಲ್ಲಿ ಸೇರಿದವರ ನಡುವೆ ಮಾತಿನ ಚಕಮಕಿ ನಡೆದು, ಇತ್ತಂಡದವರು ಪರಸ್ಪರ ಹಲ್ಲೆಗೆ ಮುಂದಾಗಿದ್ದರು. ಪೊಲೀಸರು ಚಾಲಕರನ್ನು ಮಾತನಾಡಿಸಿ ಸಮಾಧಾನ ಪಡಿಸುವ ಸಂದರ್ಭದಲ್ಲಿ ಪೊಲೀಸರ ಮಾತುಕೇಳದೆ ಶಾಂತಿ ಭಂಗ ಮಾಡುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಬಗ್ಗೆ ಸ್ವಯಂ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣದ ಬಗ್ಗೆ ವದಂತಿಗಳನ್ನು ಹಬ್ಬಿಸುವವರ ಮೇಲೆಯೂ ನಿಗಾ ಇಟ್ಟ ಪೊಲೀಸರು ಶಾಂತಿ ಭಂಗಕ್ಕೆ ಕಾರಣವಾದರೆ ಅವರ ಮೇಲೂ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.