ಪುತ್ತೂರು :16 ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ ಘಟನೆ ನ.17ರಂದು ನಡೆದಿದೆ.
ಬಂಧಿತ ಆರೋಪಿಯನ್ನು ಕೇರಳ ಕಾಸರಗೋಡು ನಿವಾಸಿ ಮಹಮ್ಮದ್ ರಫೀಕ್ ಎಂ.ಎಂ ಎಂದು ಗುರುತಿಸಲಾಗಿದೆ.
ಪುತ್ತೂರಿನಿಂದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸುಮಾರು 2 ಲೀಟರ್ ಶ್ರೀಗಂಧದ ಎಣ್ಣೆಯನ್ನು ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡ ನಂತರ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು 16 ವರ್ಷಗಳಿಂದ ತಲೆಮರೆಸಿಕೊಂಡಿದ್ದು ಈತನ ಪತ್ತೆ ಬಗ್ಗೆ ನ್ಯಾಯಾಲಯವು ದಸ್ತಗಿರಿ ವಾರೆಂಟ್ ನ್ನು ಹೊರಡಿಸಿರುತ್ತದೆ.
ಈತನ ಪತ್ತೆ ಬಗ್ಗೆ ಡಾ| ಗಾನಾ ಪಿ. ಕುಮಾರ್, ಪೊಲೀಸ್ ಉಪಾಧೀಕ್ಷಕರು ಪುತ್ತೂರು ಉಪ ವಿಭಾಗರವರು ಹಾಗೂ ಉಮೇಶ್ ಉಪ್ಪಳಿಕೆ, ವೃತ್ತ ನಿರೀಕ್ಷಕರು, ಪುತ್ತೂರು ಗ್ರಾಮಾಂತರ ರವರ ಮಾರ್ಗದರ್ಶನದಂತೆ ಠಾಣಾ ಉಪನಿರೀಕ್ಷಕರುಗಳಾದ ಉದಯರವಿ.ಎಂ.ವೈ, ಮತ್ತು ಶ್ರೀ ಅಮೀನಸಾಬ ಎಮ್ ಅತ್ತಾರ ಹಾಗೂ ಸಿಬ್ಬಂದಿಗಳಾದ ಹೆಚ್ ಸಿ ಅದ್ರಾಮ್, ಮತ್ತು ಪ್ರವೀಣ್,ರೈ ರವರು ನ. 17ರಂದು ಕೇರಳ ರಾಜ್ಯದ ಕಣ್ಣೂರ ಎಂಬಲ್ಲಿ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು , ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.