ಮುಲ್ಕಿ: ಕಣಜದ ಹುಳುಗಳಿಂದ ಕಡಿಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ 6 ಮಕ್ಕಳನ್ನು ರಕ್ಷಿಸಿದ ಗೃಹರಕ್ಷಕ ದಳ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಬುಧವಾರ ರಾತ್ರಿ ಮುಲ್ಕಿಯ ಕಿನ್ನಿಗೋಳಿಯಲ್ಲಿ ನಡೆದಿದೆ.
ಕಟೀಲು ಬಳಿಯ ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್(35) ಮೃತ ಗೃಹರಕ್ಷಕ ದಳ ಸಿಬ್ಬಂದಿ. ಇವರು ಮಂಗಳೂರಿನ ಕಂಕನಾಡಿ ಠಾಣೆಯ ಗೃಹರಕ್ಷಕ ದಳದ ಸಿಬ್ಬಂದಿಯಾಗಿದ್ದರು.
ಬುಧವಾರ ಸಂಜೆ ಕಿನ್ನಿಗೋಳಿಯ ಶ್ರೀರಾಮ ಮಂದಿರದ ಬಳಿಯಲ್ಲಿ ಆಟೋದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ, ಕಿನ್ನಿಗೋಳಿ ಪರಿಸರದಲ್ಲಿ ಕಣಜದ ಹುಳುಗಳು ಶಾಲೆಯ ಮಕ್ಕಳ ಮೇಲೆ ದಾಳಿ ನಡೆಸಿದ್ದು, ಮಕ್ಕಳು ಗಂಭೀರಾವಸ್ಥೆಯಲ್ಲಿದ್ದರು. ಈ ವೇಳೆ ತಡ ಮಾಡದೇ ಅವರು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.
ಮಕ್ಕಳನ್ನು ರಕ್ಷಿಸುವ ವೇಳೆ ಸಂತೋಷ್ ಅವರ ಮೇಲೆಯೂ ಕಣಜದ ಹುಳುಗಳು ದಾಳಿ ಮಾಡಿತ್ತು. ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದ ಸಂತೋಷ್ ಅವರು ತಾವು ಚಿಕಿತ್ಸೆ ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ. ರಾತ್ರಿ ಸುಮಾರು 9 ಗಂಟೆಯ ವೇಳೆ ತಮ್ಮ ಮನೆಯಲ್ಲ ಕುರ್ಚಿಯಲ್ಲಿ ಕುಳಿತಿದ್ದ ವೇಳೆ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.