ಪುತ್ತೂರು: ವ್ಯಕ್ತಿಯೊಬ್ಬರು ಜಮೀನಿನ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದು ನಾಡಕೋವಿಯಿಂದ ಶೂಟ್ ಮಾಡಿದಾಗ ಗುರಿ ತಪ್ಪಿದ್ದು, ಈ ಘಟನೆಯಿಂದ ಮಹಿಳೆಯೊಬ್ಬರು ಪಾರಾದ ಘಟನೆ ವೀರಮಂಗಲದಲ್ಲಿ ನ.21 ರಂದು ನಡೆದಿದ್ದು, ಘಟನೆ ಕುರಿತಾಗಿ ಮಹಿಳೆ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ವೀರಮಂಗಲ ಗ್ರಾಮದ ಶಾಂತಿಗೋಡು ಕೊಯಕುಡೆ ನಿವಾಸಿ ಧರ್ಣಮ್ಮ ದೂರುದಾರರು.
ವೀರಮಂಗಲ ಗ್ರಾಮದ ಶಾಂತಿಗೋಡು ಕೊಯಕುಡೆ ನಿವಾಸಿ ದೇವಪ್ಪ ಗೌಡರ ವಿರುದ್ಧ ದೂರು ನೀಡಲಾಗಿದೆ.
ನ.21 ರಂದು ಮಧ್ಯಾಹ್ನ ಧರ್ಣಮ್ಮ ತನ್ನ ಮನೆಯ ಬಳಿ ಗಂಡ ಹಾಗೂ ಮಗನೊಂದಿಗೆ ತಮ್ಮ ಸ್ವಾಧೀನ ಇರುವ ಜಮೀನಿನಲ್ಲಿ ತೊಂಡೆಕಾಯಿ ಬಳ್ಳಿಗೆ ಚಪ್ಪರವನ್ನು ನಿರ್ಮಿಸುತ್ತಿರುವ ಸಮಯ ಮೈದುನ ದೇವಪ್ಪ ಗೌಡ ಎಂಬವನು ಜಮೀನಿನ ಸ್ವಾಧೀನತೆಯ ತಕರಾರಿನ ದ್ವೇಷದಿಂದ ಇದ್ದ ಜಮೀನಿಗೆ ಬಂದೂಕು ಹಿಡಿದುಕೊಂಡು ಬಂದು, ಧರ್ಣಮ್ಮ ರವರಲ್ಲಿ ಈ ಜಾಗ ನನಗೆ ಸೇರಿದ್ದು, ಈ ಜಾಗದಲ್ಲಿ ನೀವು ಏನಾದರು ಬೆಳೆದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳುತ್ತಾ ಏಕಾಏಕಿಯಾಗಿ ಆತನ ಕೈಯಲ್ಲಿದ್ದ ಬಂದೂಕಿನಿಂದ ಧರ್ಣಮ್ಮ ಕಡೆಗೆ ಗುರಿ ಇಟ್ಟು ಬಂದೂಕಿನಿಂದ ಗುಂಡು ಹಾರಿಸಿದ್ದು ,ಆ ಸಮಯ ಅವರು ಪಕ್ಕಕ್ಕೆ ಬಾಗಿದ ಪರಿಣಾಮ ಗುಂಡು ತಾಗದೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ: 97/2021 ಕಲಂ: 506,307 ಐಪಿಸಿ ಮತ್ತು ಕಲಂ: 25,27 ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.