ಮಂಗಳೂರು: ಕಾಟಿಪಳ್ಳ ಇನ್‌ಫೆಂಟ್ ಮೇರಿ ಚರ್ಚ್‌ನ ಧರ್ಮಗುರು ಫಾ. ವಲೇರಿಯನ್ ಲೂವಿಸ್ ಅವರು ಹೃದಯಾಘಾತದಿಂದ ನಿಧನರಾದರು.
ನ.21 ರಂದು ಪ್ರಾರ್ಥನೆ ಸಂದರ್ಭದಲ್ಲಿ ಕುಸಿದು ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.
ಫಾ. ವಲೇರಿಯನ್ ಲೂವಿಸ್ ಅವರು 1966ರಲ್ಲಿ ಪುತ್ತೂರಿನ ಆಂಟನಿ ಲೂಯಿಸ್ ಮತ್ತು ಕ್ಯಾಥರೀನ್ ಬ್ರಿಜಿಡ್ ಲೋಬೋ ಅವರ ಪುತ್ರರಾಗಿ ಜನಿಸಿದರು. 1995 ರಲ್ಲಿ ಮಂಗಳೂರು ಧರ್ಮಪ್ರಾಂತ್ಯದಿಂದ ಧರ್ಮಗುರುಗಳಾಗಿ ನೇಮಕಗೊಂಡರು.
ವಾಮಂಜೂರು, ಬಾರ್ಕೂರು ಚರ್ಚ್ ಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಅವರು ಸೇವೆ ನೀಡಿದ್ದಾರೆ. ಮತ್ತು ಜೆಪ್ಪುವಿನಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ಅವರು ಕೊಕ್ಕಡ, ಸುಳ್ಯ ಮತ್ತು ಮಂಜೇಶ್ವರ ಚರ್ಚ್ ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಮಂಜೇಶ್ವರ ನೂತನ ಚರ್ಚ್ ನ ನಿರ್ಮಾಣ ಕಾರ್ಯವೂ ಕೂಡ ಇವರ ಸೇವಾವಧಿಯಲ್ಲೇ ನಡೆದಿತ್ತು.
2019ರಿಂದ ಕಾಟಿಪಳ್ಳ ಚರ್ಚ್‌ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದರು.