ಮಂಗಳೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ಶ್ವಾನದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಾಂಬ್ ಪತ್ತೆ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಲಾಬ್ರಡೋರ್ ಜಾತಿಗೆ ಸೇರಿದ ಶ್ವಾನ ಲೀನಾ ಅನಾರೋಗ್ಯದಿಂದ ನ.21 ರಂದು ಮೃತಪಟ್ಟಿತು.
೮ ವರ್ಷ 9 ತಿಂಗಳಿನ ಲೀನಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ನ.16ರಿಂದ ಆಹಾರ ಸೇವಿಸುತ್ತಿರಲಿಲ್ಲ. ಹೀಗಾಗಿ ಆಕೆಗೆ ಗ್ಲುಕೋಸ್ ನೀಡಲಾಗುತ್ತಿತ್ತು. ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಭಾನುವಾರ ಮುಂಜಾನೆ ಸಾವಿಗೀಡಾಗಿದೆ.
ಲೀನಾಳನ್ನು ಸೇನಾ ಗೌರವದೊಂದಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
2013 ಮೇ 5ರಂದು ಜನಿಸಿದ ಲೀನಾ ರಾಂಚಿಯಲ್ಲಿ ಸ್ಫೋಟಕ ಪತ್ತೆ ಕಾರ್ಯಾಚರಣೆಯ ತರಬೇತಿ ಪಡೆದು ಮಂಗಳೂರು ವಿಮಾನ ನಿಲ್ದಾಣ ಶ್ವಾನದಳಕ್ಕೆ ಸೇರ್ಪಡೆಯಾಗಿತ್ತು.
ಮಂಗಳೂರು ವಿಮಾನ ನಿಲ್ದಾಣದಲ್ಲಿರುವ ಶ್ವಾನದಳ ವಿಭಾಗದ ನಾಲ್ಕು ಶ್ವಾನಗಳಲ್ಲಿ ಲೀನಾ ಅತ್ಯಂತ ಚುರುಕಿನಿಂದ ಕೂಡಿತ್ತು ಎನ್ನಲಾಗಿದೆ. ದಾಖಲೆಗಳಲ್ಲಿ ಲೀನಾ ಎಂಬ ಹೆಸರಿದ್ದರೂ ಸಿಐಎಸ್‌ಎಫ್ ಸಿಬ್ಬಂದಿ ಇದನ್ನು ‘ಡೋಲಿ’ ಎಂದೇ ಕರೆಯುತ್ತಿದ್ದರು.
2020 ಜನವರಿ 12ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿ ಆದಿತ್ಯ ರಾವ್ ಇರಿಸಿದ್ದ ಬಾಂಬ್‌ನ್ನು ಲೀನಾ ಪತ್ತೆ ಮಾಡಿತ್ತು.