ಪುತ್ತೂರು: ಕಾಲೇಜು ವಿದ್ಯಾರ್ಥಿಗಳ ನಡುವೆ ಜಗಳ ನಡೆದು ಹೊಡೆದಾಡಿಕೊಂಡ ಘಟನೆ ಪುತ್ತೂರಿನ ಸರಕಾರಿ ಕಾಲೇಜುವೊಂದರಲ್ಲಿ ನಡೆದಿದೆ.
ಕೆಲ ದಿನಗಳಿಂದ ವಿದ್ಯಾರ್ಥಿಗಳ ಮಧ್ಯೆಯೇ ಜಗಳ ನಡೆಯುತ್ತಿದ್ದು ಇಂದು ಆ ಜಗಳ ತಾರಕಕ್ಕೇರಿ ಎರಡು ತಂಡದ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಸಂದರ್ಭದಲ್ಲಿ ಕಾಲೇಜಿನ ಹೊರಗಡೆಯು ಕೆಲ ಯುವಕರು ಸೇರಿದ್ದು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಕಾಲೇಜು ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಹೊಡೆದಾಟದಿಂದ ಮೂವರು ವಿದ್ಯಾರ್ಥಿಗಳು ಗಾಯಗೊಂಡಗೊಂಡಿದ್ದು, ಓರ್ವ ವಿದ್ಯಾರ್ಥಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹಾಗೂ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎನ್ನಲಾಗಿದೆ.
ಸರಕಾರಿ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ ಕೊಡಿಪ್ಪಾಡಿ ನಿವಾಸಿ ಮಹಮ್ಮದ್ ಆದಿಲ್, “ನಾನು ನನ್ನ ಸಹಪಾಠಿ ಹಿಂದೂ ಯುವತಿಯ ಜೊತೆ ಮಾತನಾಡಿದಕ್ಕೆ, ನಾನು ಅವಳನ್ನು ಪ್ರೀತಿಸುತ್ತಿದ್ದೇನೆ, ಅವಳ ಕೈ ಹಿಡಿದುಕೊಂಡು ಓಡಾಡುತ್ತಿದ್ದೇನೆ ಎಂದು ಆರೋಪಿಸಿ ಹಿಂದೂ ಯುವಕರು ನನ್ನ ಮೇಲೆ ಹಲ್ಲೆ ಮಾಡಿದ್ದು, ಅಷ್ಟೇ ಅಲ್ಲದೇ ಇನ್ನೊಂದು ಬಾರಿ ಅವಳ ಜೊತೆ ಕಾಣಿಸಿಕೊಂಡರೆ ಸಾಯಿಸಿ ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ” ಎಂದು ಆರೋಪಿಸಿದ್ದಾನೆ.
ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಕೊಡಿಪ್ಪಾಡಿ ನಿವಾಸಿ ಪ್ರಣಾಮ್ ಮತ್ತು ಕರ್ಮಲ ನಿವಾಸಿ ಆದಿತ್ಯ, “ಹಿಂದೂ ಯುವತಿಯರು ಹೋಗುವಾಗ ಅವರಿಗೆ ಗೇಲಿ ಮಾಡುತ್ತಿರುವುದನ್ನು, ನಾವು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದು, ಅಷ್ಟೇ ಅಲ್ಲದೇ ಜಾತಿ ಬಗ್ಗೆ ನಿಂದಿಸಿದ್ದಾರೆ. ಅಲ್ಲದೇ ಹೊರಗಡೆಯಿಂದ ಯುವಕರನ್ನು ಕರೆದುಕೊಂಡು ಬಂದು ನಮಗೆ ಬೆದರಿಕೆ ಹಾಕಿದ್ದಾರೆ” ಎಂದು ಆರೋಪಿಸಿದ್ದಾರೆ.
ಕೆಲದಿನಗಳಿಂದ ಸರಕಾರಿ ಕಾಲೇಜು ಆವರಣದಲ್ಲಿ ಈ ರೀತಿಯ ಕೃತ್ಯಗಳು ಸಂಭವಿಸುತ್ತಿದ್ದು, ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ..