ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಭರ್ಜರಿ ಲಕ್ ಖುಲಾಯಿಸಿದೆ. ಮೀನುಗಾರರು ಹಿಡಿದು ತಂದಿರುವ ಅಪರೂಪದ “ಗೋಳಿ ಮೀನು (Special Fish)” ಬರೋಬ್ಬರಿ 1.80 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ಉಡುಪಿ ಜಿಲ್ಲೆಯ ಮಲ್ಪೆಯ ತೊಟ್ಟಂನ ಶಾನ್ ರಾಜ್ ಎಂಬವರಿಗೆ ಸೇರಿದ ಬಲರಾಮ್ ಬೋಟಿನಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಆದರೆ ಮೀನುಗಾರಿಕೆಯ ವೇಳೆಯಲ್ಲಿ ಅಪರೂಪ ಮೀನು ದೊರೆತಿತ್ತು. ಎಂದಿನಂತೆ ಮೀನುಗಳನ್ನು ತಂದು ಮಲ್ಪೆ ಬಂದರಿನಲ್ಲಿ ಹರಾಜು ಹಾಕಿದ್ದಾರೆ. ಈ ವೇಳೆಯಲ್ಲಿ ಮೀನುಗಾರರು ಆಶ್ವರ್ಯ ಚಕಿತರಾಗಿದ್ದಾರೆ. ಯಾಕೆಂದ್ರೆ ಮೀನುಗಾರರು ಹಿಡಿದು ತಂದಿದ್ದ ಗೋಳಿ ಮೀನು ಬರೋಬ್ಬರಿ ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿ ಮಾರಾಟವಾಗಿದೆ. ಮೀನಿನ ಹರಾಜು ನಡೆಯುವ ವೇಳೆಯಲ್ಲಿ ನೆರೆದಿದ್ದವರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು.
18 ಕೆಜಿ ತೂಕವಿದ್ದ ಗೋಳಿ ಮೀನು ಕೆ.ಜಿಗೆ ಬರೋಬ್ಬರಿ 9060 ರೂ. ನಂತೆ ಮಾರಾಟವಾಗಿದೆ. ಮಲ್ಪೆ ಬಂದರಿನಲ್ಲಿ ಆಗಾಗ ಅಪರೂಪದ ಮೀನುಗಳು ಹರಾಜಾಗುತ್ತಿವೆ. ಆದರೆ ಇಷ್ಟೊಂದು ದೊಡ್ಡ ಮೊತ್ತಕ್ಕೆ ಒಂದು ಮೀನು ಹರಾಜು ಆಗಿರೋದು ಇದೇ ಮೊದಲು ಎನ್ನುತ್ತಿದ್ದಾರೆ ಮೀನುಗಾರರು. ಗೋಳಿ ಮೀನು ಅತ್ಯಂತ ಅಪರೂಪದ್ದು, ಈ ಮೀನನ್ನು ಹೆಚ್ಚಾಗಿ ಔಷಧ ತಯಾರಿಕೆಗೆ ಬಳಕೆ ಮಾಡುತ್ತಾರೆ. ಅದ್ರಲ್ಲೂ ಮಧುಮೇಹ, ಅಸ್ತಮಾ ಕಾಯಿಲೆಗಳಿಗೆ ಈ ಮೀನು ರಾಮಬಾಣ. ಹೀಗಾಗಿಯೇ ಈ ಮೀನು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮೀನು ಮಾರಾಟವಾಗಿದೆ ಎನ್ನುತ್ತಾರೆ ಮೀನುಗಾರರು.