ಕಾಸರಗೋಡು: ಹಲವು ಪ್ರಕರಣಗಳಲ್ಲಿ ಬೇಕಾಗಿದ್ದು, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ರೆಡ್ ಕಾರ್ನರ್ ನೋಟೀಸು ಜಾರಿಗೊಳಿಸಲಾಗಿದೆ.
ಉಪ್ಪಳದ ಕಯ್ಯಾರು ಅಟ್ಟೆಗೋಳ ಕೊಳಂಜ ಹೌಸ್‌ನ ಮುಹಮ್ಮದ್ ರಫೀಕ್ ಯಾನೆ ನಪ್ಪಟ ರಫೀಕ್ (32) ವಿರುದ್ಧ ರೆಡ್ ಕಾರ್ನರ್ ನೋಟೀಸು ಜಾರಿಗೊಳಿಸಲಾಗಿದೆ.
ಕಾಸರಗೋಡು ಪೊಲೀಸರ ಅರ್ಜಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೊಲೆ, ಅಪಹರಣ, ಕಳವು,
ದರೋಡೆ ಸಹಿತ ವಿವಿಧ ಪ್ರಕರಣಗಳಲ್ಲಿ ನಪ್ಪಟ ರಫೀಕ್ಆರೋಪಿಯಾಗಿದ್ದಾನೆ. ಈತ ಭೂಗತ ಪಾತಕಿ ರವಿ
ಪೂಜಾರಿ ಸಹಾಯಕ ಯೂಸೆಫ್ ಸಿಯ ಎಂಬಾತನ ಅನುಚರನೆಂದು ಪೊಲೀಸರು ತಿಳಿಸಿದ್ದಾರೆ.
ಈತನ ವಿರುದ್ಧ ಕೇರಳ, ಕರ್ನಾಟಕ ಕಾಸರಗೋಡು ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣ ದಾಖಲಾಗಿವೆ. ಈತನ ತಂಡದ ಪ್ರಮುಖನಾದ ಯೂಸೆಫ್ ಸಿಯನನ್ನು ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಿಂದ ಬಂಧಿಸಲಾಗಿತ್ತು.
ರೆಡ್ ಕಾರ್ನರ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಈತ ನೆಲೆಸಿರುವ ರಾಜ್ಯದ ಪೊಲೀಸರು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಬೇಕು. ಈ ಪ್ರಕ್ರಿಯೆ ಕೂಡಲೇ ನಡೆಯಲಿದೆಯೆಂದು ಕಾಸರಗೋಡು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿ ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿ ವಿದೇಶಗಳಲ್ಲಿ ನೆಲೆಸಿರುವವವರನ್ನು ಭಾರತಕ್ಕೆ ಕರೆತರಲು ಯತ್ನ ನಡೆಯುತ್ತಿದೆಯೆಂದು ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ತಿಳಿಸಿದ್ದಾರೆ.
ನಪ್ಪಟ ರಫೀಕ್ ವಿರುದ್ಧ 2008ರಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಮಣ್ಣಗುಳಿಯಲ್ಲಿ ನಡೆದ ಸತ್ತಾರ್ ಕೊಲೆ ಪ್ರಕರಣ, ಕರ್ನಾಟದಲ್ಲಿ ನಡೆದ ಡಾನ್ ತಸ್ಲಿಂ ಕೊಲೆ ಪ್ರಕರಣದಲ್ಲಿ ಈತ ಅಪರಾಧಿಯಾಗಿದ್ದಾನೆ.
ಅಷ್ಟೇ ಅಲ್ಲದೇ ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನದಲ್ಲಿ ನಡೆದ ಕೊಲೆ, ಕೊಲೆ ಯತ್ನ, ಮಂಗಳೂರು ಸಬ್ ಜೈಲಲ್ಲಿ ಪ್ರತೀಕಾರಕ್ಕಾಗಿ ನಡೆದಿದ್ದ ಗಣೇಶ್ ಎಂಬ ವಿಚಾರಣಾಧೀನ ಕೈದಿಯ ಕೊಲೆ, ಅಪಹರಣ, ಸುಲಿಗೆ ಸೇರಿದಂತೆ ಕರ್ನಾಟಕ-ಕೇರಳದಲ್ಲಿ ಹತ್ತಕ್ಕೂ ಹೆಚ್ಚು ಗಂಭೀರ ಪ್ರಕರಣಗಳಿಗೆ ಬೇಕಾಗಿದ್ದ ನಟೋರಿಯಸ್ ಕ್ರಿಮಿನಲಾಗಿದ್ದಾನೆ.