ಪುತ್ತೂರಿಗೆ ಬಂದು ನಾಪತ್ತೆಯಾಗಿದ್ದ ಮೈಸೂರಿನ ಫೊಟೋಗ್ರಾಫರ್ ಜಗದೀಶ್ ರವರನ್ನು ಕೊಲೆಗೈದು, ಶವವನ್ನು ಕಾಡು ಪ್ರದೇಶದಲ್ಲಿ ಗುಂಡಿ ತೋಡಿ ಹೂತಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ತಿಂಗಳಾಡಿ ಉಮೇಶ್ ರೈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಬಳಿಕ ನ್ಯಾಯಾಲಯದಲ್ಲಿ ದೋಷಮುಕ್ತಗೊಂಡಿದ್ದ ಬಡಗನ್ನೂರು ಗ್ರಾಮದ ಅಣಿಲೆ ಜಯರಾಜ್ ಶೆಟ್ಟಿ (48) ಎಂಬವರನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ.
ಕೃತ್ಯಕ್ಕೆ ಒಳಸಂಚು ನಡೆಸಿದ್ದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯ ನಗರ ನಿವಾಸಿಯಾಗಿದ್ದ,ಮಂಗಳೂರು ತಾಲೂಕು ಕಾವೂರು ಗ್ರಾಮದ ಶಿವನಗರ ಮುಲ್ಲಕಾಡು ಜಗದೀಶ್ (58) ರವರನ್ನು ಕೊಲೆ ಮಾಡಿದ್ದ ಆರೋಪದಲ್ಲಿ ಈಗಾಗಲೇ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಜಯರಾಜ್ ಬಂಧನದೊಂದಿಗೆ ಬಂಧಿತರ ಸಂಖ್ಯೆ ಐದಕ್ಕೇರಿದೆ.
ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳ ವಿಚಾರಣೆ ವೇಳೆ, ಕೃತ್ಯಕ್ಕೆ ಒಳಸಂಚು ರೂಪಿಸಿರುವುದು ಜಯರಾಜ್ ಶೆಟ್ಟಿ ಎಂಬ ಮಾಹಿತಿಯನ್ನು ಪಡೆದುಕೊಂಡಿರುವ ಪೊಲೀಸರು ಈತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.