ಪುತ್ತೂರು: ಮನೆಯ ತ್ಯಾಜ್ಯಗಳನ್ನು ತಂದು ಸಾರ್ವಜನಿಕ ಸ್ಥಳದಲ್ಲಿ ಎಲ್ಲೆಂದರಲ್ಲಿ ಎಸೆದು ಗ್ರಾಮದ ಸ್ವಚ್ಚತೆಗೆ ಧಕ್ಕೆ ತರುತ್ತಿರುವವರಿಗೆ ಕಬಕ ಗ್ರಾಮ ಪಂಚಾಯತ್ ತಕ್ಕ ಶಾಸ್ತಿ ಮಾಡುತ್ತಿದೆ. ಜೂ.6ರಂದು ಕಾರ್ಯಾಚರಣೆ ನಡೆಸಿದ ಪಂಚಾಯತ್‌ನ ಅಧಿಕಾರಿ ಹಾಗೂ ಸಿಬ್ಬಂದಿಗಳು, ಸಾರ್ವಜನಿಕ ಸ್ಥಳದಲ್ಲಿ ಎಸೆದು ಹೋಗಿದ್ದ ತ್ಯಾಜ್ಯದ ಚೀಲದಲ್ಲಿದ್ದ ವಿಳಾಸವನ್ನು ಆಧರಿಸಿ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿ ಅವರಿಗೆ ದಂಡ ವಿಧಿಸಿದ್ದಾರೆ.
ಕಬಕ ಪಂಚಾಯತ್ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಹಿತ ಪ್ರಮುಖ ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಕಳೆದ ಕೆಲವು ದಿನಗಳಿಂದ ಕಸದ ರಾಶಿಗಳು ಹೆಚ್ಚಾಗುತ್ತಿದ್ದವು.ಮನೆ ಬಳಕೆಯ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ರಸ್ತೆ ಬದಿ ಎಸೆಯುವ ಪ್ರವೃತ್ತಿ ಅಧಿಕವಾಗತೊಡಗಿತ್ತು.
ಪರಿಣಾಮ ಪರಿಸರ ಮಾಲಿನ್ಯ, ದುರ್ವಾಸನೆ ಮತ್ತು ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿತ್ತು.ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ನೇತೃತ್ವದಲ್ಲಿ ಪಂಚಾಯತ್ ವಿಶೇಷ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿತ್ತು.
ಜೂ.6ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸಿದಾಗ ರಸ್ತೆ ಬದಿ ತ್ಯಾಜ್ಯ ತುಂಬಿದ ಚೀಲಗಳು ಪತ್ತೆಯಾಗಿದ್ದವು.ತ್ಯಾಜ್ಯ ಚೀಲಗಳನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ಆನ್‌ಲೈನ್ ಪಾರ್ಸೆಲ್‌ಗಳ ವಿಳಾಸವಿರುವ ಕವರ್‌ಗಳು, ಇತರ ಬಿಲ್ ಗಳು ಸಹಿತ ವಿವಿಧ ವಿಳಾಸಗಳಿರುವ ಕವರ್‌ಗಳು ಪತ್ತೆಯಾಗಿದ್ದವು.ಇದನ್ನೇ ಆಧರಿಸಿಕೊಂಡು ಕಾರ್ಯಾಚರಣೆ ನಡೆಸಿದ ಪಂಚಾಯತ್ ಅಧಿಕಾರಿಗಳು, ತ್ಯಾಜ್ಯ ಎಸೆದವರನ್ನು ಪತ್ತೆ ಮಾಡಿ ಅವರಿಗೆ ತಲಾ ರೂ.5000 ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
11 ಪ್ರಕರಣಗಳು: ಕಳೆದ ಕೆಲ ದಿನಗಳ ಹಿಂದೆ ಪ್ರಾರಂಭಗೊಂಡ ಪಂಚಾಯತ್ ಕಾರ್ಯಾಚರಣೆಯಲ್ಲಿ ಒಟ್ಟು 11 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ತ್ಯಾಜ್ಯ ಎಸೆದವರಿಗೆ ಪ್ರತಿಯೊಬ್ಬರಿಗೂ ತಲಾ ರೂ.5 ಸಾವಿರದಂತೆ ದಂಡ ವಿಧಿಸಿದ್ದಾರೆ.ಇದರಲ್ಲಿ 5 ಮಂದಿ ಈಗಾಗಲೇ ದಂಡದ ಮೊತ್ತ ಪಾವತಿಸಿದ್ದಾರೆ. ಎರಡು ಪ್ರಕರಣಗಳಲ್ಲಿ ನೋಟಿಸ್ ನೀಡಲಾಗಿದೆ. ಇಬ್ಬರು ಜೂ.8ರಂದು ಪಾವತಿಸುವುದಾಗಿ ತಿಳಿಸಿರುವುದಾಗಿ ಪಿಡಿಓ ಸುಭಾಷ್‌ಚಂದ್ರ ಮಾಹಿತಿ ನೀಡಿದ್ದಾರೆ.


























