ಮೈಸೂರು : ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಮೈಸೂರಿನ ಹುಣಸೂರಿನಲ್ಲಿ ಆಘಾತ ಮೂಡಿಸಿದೆ. ಸಾಲದ ಒತ್ತಡವೇ ಈ ದುರಂತಕ್ಕೆ ಕಾರಣವೇ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಹರೀಶ್ (49), ಪತ್ನಿ ನಿಶ್ಚಿತ (36), ಪುತ್ರಿಯರಾದ ನೆಕ್ಸಾ (13) ಮತ್ತು ರಕ್ಷಾ (6) ಮೃತ ದುರ್ದೈವಿಗಳು. ಹರೀಶ್ ಮೊದಲು ಪತ್ನಿ ಹಾಗೂ ಇಬ್ಬರು ಮಕ್ಕಳ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಮನೆಯ ಮೊದಲ ಮಹಡಿಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹುಣಸೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಯಲ್ಲಿ ಡೆತ್‌ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ (I am hanging upstairs room (ನಾನು ಮೇಲಿನ ಮಹಡಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದೇನೆ) ಹರೀಶ್ ಬರೆದಿದ್ದಾನೆ. ಸಾಲದ ಒತ್ತಡ ಹಾಗೂ ಆಸ್ತಿ ಸಂಬಂಧ ಕೆಲವು ವಿವರಗಳನ್ನು ಬರೆದಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಎಲ್ಲಾ ದಾಖಲೆಗಳು ಲಾಕರ್‌ನಲ್ಲಿ ಇವೆ ಎಂದು ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

























