ನೆಲ್ಯಾಡಿ: ಯುವಕನೋರ್ವ ಇಲಿ ಜ್ವರದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನ.27 ರಂದು ಬೆಳಿಗ್ಗೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಮೃತರನ್ನು ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯ ನೋಣಯ್ಯ ಗೌಡ ಹಾಗೂ ಮಾಜಿ ಅಧ್ಯಕ್ಷೆ ಇಂದಿರಾ ದಂಪತಿ ಪುತ್ರ, ಗೋಳಿತ್ತೊಟ್ಟು ಗ್ರಾಮದ ಡೆಬ್ಬೇಲಿ ನಿವಾಸಿ ಮಹೇಶ್(27) ಎನ್ನಲಾಗಿದೆ. ಇವರು ಇಲಿಜ್ವರದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮಹೇಶ್ ರವರಿಗೆ ಕೆಲ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ನ.26 ರಂದು ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ಕರೆತಂದಿದ್ದರು. ಬಳಿಕ ರಾತ್ರಿ ವೇಳೆ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಆದರೇ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ನ.27 ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮಹೇಶ್ ಗೋಳಿತ್ತೊಟ್ಟು ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರಾಗಿದ್ದು, ನೆಲ್ಯಾಡಿ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಕಾರ್ಯದರ್ಶಿಯೂ ಆಗಿದ್ದರು. ಮಹೇಶ್ ರವರಿಗೆ ವಿವಾಹ ನಿಗದಿಯಾಗಿದ್ದು, ಮುಂದಿನ ಜನವರಿಯಲ್ಲಿ ಮದುವೆ ನಡೆಯಲಿತ್ತು ಎಂದು ತಿಳಿದು ಬಂದಿದೆ.
ಮೃತರು ತಂದೆ,ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.



























