ಬೆಂಗಳೂರಿನಲ್ಲಿ ಮುಳಿಯ ಪ್ರತಿಷ್ಠಾನ ಮತ್ತು ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಶೇಷ ಚಿಂತನ ಮಂಥನ ‘ಮನೆ-ಮನದಲ್ಲಿ ಕನ್ನಡ’ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸಿದರು. .
‘ಎಲ್ಲ ಉದ್ಯಮ ಸಂಸ್ಥೆಗಳು ಕನ್ನಡದ ಕಾಳಜಿ ತೋರಿ ಪ್ರೋತ್ಸಾಹಿಸಿದರೆ ಭಾಷೆಯ ಉಳಿವು, ಬೆಳವಣಿಗೆ ಏನೂ ಕಷ್ಟವಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಶುಕ್ರವಾರ ನಗರದ ಮುಳಿಯ ಜುವೆಲ್ಸ್ ಆಭರಣ ಸಂಸ್ಥೆಯಲ್ಲಿ ಮುಳಿಯ ಪ್ರತಿಷ್ಠಾನ ಮತ್ತು ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಶೇಷ ಚಿಂತನ ಮಂಥನ ‘ಮನೆ-ಮನದಲ್ಲಿ ಕನ್ನಡ’ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಭಾಷೆ ಭಾಷಣದ ವಸ್ತು ಅಲ್ಲ. ಅದು ನಮ್ಮ ಸಂಸ್ಕೃತಿ, ನಡವಳಿಕೆಯನ್ನು ಒಳಗೊಂಡಿದೆ. ಸಂಸ್ಕೃತಿ ಶ್ರೀಮಂತಗೊಳಿಸಲು ಕನ್ನಡದಷ್ಟು ಶ್ರೀಮಂತ ಭಾಷೆ ಇನ್ನೊಂದು ಇಲ್ಲ. ಇತ್ತೀಚೆಗೆ ‘ಮಾತಾಡ್ ಮಾತಾಡ್ ಕನ್ನಡ’ ಪರಿಕಲ್ಪನೆಗೆ ಸುಮಾರು ೨೦ ಲಕ್ಷಕ್ಕೂ ಅಧಿಕ ಜನ ಸ್ಪಂದಿಸಿದ್ದರು. ಅಂದರೆ ನಮ್ಮಲ್ಲಿ ಭಾಷಾಭಿಮಾನ ಖಂಡಿತವಾಗಿಯೂ ಇದೆ. ಆದರೆ, ಅಭಿವ್ಯಕ್ತಿಗೆ ವೇದಿಕೆ ಬೇಕಿತ್ತು ಅಷ್ಟೇ’ ಎಂದರು.
ಸಾಹಿತಿ, ಸಂಶೋಧಕಿ ಡಾ.ಕಮಲಾ ಹಂಪನಾ ಮಾತನಾಡಿ, ‘ಹಿಂದಿಯೊಂದೇ ರಾಷ್ಟ್ರಭಾಷೆ ಅಲ್ಲ. ಹೆಚ್ಚು ಬಳಕೆಯಲ್ಲಿ ಇರುವ ಕಾರಣ ಅದು ರಾಷ್ಡ್ರಭಾಷೆ ಎಂದು ಕರೆಸಿಕೊಂಡಿದೆ ಅಷ್ಟೆ. ಕನ್ನಡ ಸಹಿತ ಭಾರತದ ೨೩ ಭಾಷೆಗಳೂ ರಾಷ್ಟ್ರಭಾಷೆಗಳೇ ಆಗಿವೆ.
ಹೀಗಿದ್ದೂ ಹಿಂದಿಯ ಒತ್ತಡ ಹೇರಿದಾಗ ನಾವು ಪ್ರತಿರೋಧ ತೋರಲೇಬೇಕಾಗಿದೆ’ ಎಂದರು. ‘ಬಂಗಾರದ ಮಳಿಗೆಯಲ್ಲಿ ಕನ್ನಡ ವಜ್ರ ಆಗಬೇಕು. ನಮ್ಮ ಮನೆಗಳಲ್ಲಿ ಕನ್ನಡದ ಪದಗಳು ನಲಿದಾಡಬೇಕು. ಅಂಥ ಪದ ಸಮೃದ್ಧತೆಯನ್ನು ಕನ್ನಡ ಹೊಂದಿದೆ. ಹಾಗಿದ್ದರೂ ನಮ್ಮ ವ್ಯವಹಾರಗಳಿಗೆ ಪರಭಾಷೆಯನ್ನು ನೆಚ್ಚಿಕೊಂಡಿರುವುದನ್ನು ನೋಡಿದಾಗ ನೋವೆನಿಸುತ್ತದೆ’ ಎಂದು ಹೇಳಿದರು.
‘ನನ್ನ ಬ್ಯಾಂಕ್ ವ್ಯವಹಾರ ಎಲ್ಲವೂ ಕನ್ನಡದಲ್ಲೇ ನಡೆಯುತ್ತಿದೆ. ಯಾರೂ ನನ್ನ ಕನ್ನಡದ ವ್ಯವಹಾರವನ್ನು ತಿರಸ್ಕರಿಸಿಲ್ಲ. ಹಾಗೊಂದು ವೇಳೆ ತಿರಸ್ಕರಿಸಿದರೆ ಅವರು ಉಳಿಯುವುದೂ ಇಲ್ಲ’ ಎಂದರು.
ಸಾಹಿತಿ, ಶಿಕ್ಷಣ ತಜ್ಞೆ ಡಾ.ಗೀತಾ ರಾಮಾನುಜಮ್ ಮಾತನಾಡಿ, ‘ಮೂಲತಃ ತಮಿಳು ಮಾತೃಭಾಷೆಯವಳಾದ ನಾನು ೨೨ನೇ ವಯಸ್ಸಿನಲ್ಲಿ ಕನ್ನಡ ಕಲಿತು ಪತ್ರಿಕೆಯಲ್ಲಿ ಮುಖಪುಟ ಲೇಖನ ಬರೆಯುವಂತಾಯಿತು. ಶಿಕ್ಷಕಿಯಾಗಿದ್ದಾಗ ಮಕ್ಕಳಿಗೆ ಕನ್ನಡ ಕಲಿಸಲಾಗದೇ ಅತ್ತಿದ್ದೂ ಇದೆ. ಪಾಠ ಕಲಿಸಬೇಕಾದಾಗ ಕನ್ನಡ ಕಲಿಯಲೇಬೇಕಾಯಿತು. ಕನ್ನಡವನ್ನು ಸ್ವಾಗತಿಸಿ ಆಸ್ವಾದಿಸಿದ್ದಕ್ಕೆ ನನಗೆ ಕನ್ನಡ ತಾಯಿ ಸಿಕ್ಕಿದಳು. ಹಾಗೆ ನೋಡಿದರೆ ಮಹಿಳೆಯರಿಗೇ ಇಂಗ್ಲಿಷ್ ವ್ಯಾಮೋಹ ಹೆಚ್ಚು. ಇದೇ ಬೇಸರದ ಸಂಗತಿ’ ಎಂದರು. ’
ಹಾಸ್ಯ ಸಾಹಿತಿ ಪ್ರೊ.ಭುವನೇಶ್ವರಿ ಹೆಗಡೆ ಮಾತನಾಡಿ, ‘ಲಕ್ಷ್ಮಿಯ ಜಾಗಕ್ಕೆ ಸರಸ್ವತಿಯನ್ನು ಕರೆದಿದ್ದೀರಿ. ಸರಸ್ವತಿ ಭುವನೇಶ್ವರಿ (ಕನ್ನಡ ತಾಯಿ) ಇಲ್ಲಿ ಬಂದಿದ್ದಾಳೆ. ಉದ್ಯಮ ಬೆಳವಣಿಗೆಗೆ ನೂರಾರು ಮರ‍್ಗಗಳು ಇವೆ. ಆದರೆ, ಕನ್ನಡತನವನ್ನು ಸೇರಿಸಿಕೊಂಡು ನಾಡಿನ ಅಸ್ಮಿತೆಯನ್ನು ಮುಳಿಯ ಸಂಸ್ಥೆ ಸಾರಿದೆ. ಮುಳಿಯ ತಿಮ್ಮಪ್ಪ ಅವರು ಕಡು ಬಡತನವನ್ನೂ ಕಂಡವರು. ಬಡತನವೇ ಅನೇಕ ಕವಿಗಳನ್ನು ಹುಟ್ಟು ಹಾಕಿದೆ. ಅವರ ಪರಂಪರೆಯನ್ನು ಕುಟುಂಬದವರು ಮುಂದುವರಿಸಿಕೊಂಡು ಹೋಗುತ್ತಿರುವುದು ಅಭಿನಂದನೀಯ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಳಿಯ ಆಭರಣ ಸಂಸ್ಥೆಯ ಆಡಳಿತ ನರ‍್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ‘ಕನ್ನಡದ ಭಾಷೆಯೆಂದರೆ ಕೇವಲ ಆಡು ನುಡಿಯಲ್ಲ. ಅಲ್ಲೊಂದು ಜನಸಂಸ್ಕೃತಿ, ಉಡುಗೆ, ತೊಡುಗೆ ಆಭರಣಗಳು ಇವೆ. ಕನ್ನಡನಾಡಿನಲ್ಲಿ ಅದ್ಭುತವಾದ ಆಭರಣ ವೈವಿಧ್ಯ ಇದೆ. ದಕ್ಷಿಣಕನ್ನಡದ ಕರಿಮಣಿ, ಕೊಡವರ ವಿಶಿಷ್ಟ ಆಭರಣಗಳು ಹೀಗೆ ಪ್ರದೇಶವಾರು ವಿಶಿಷ್ಟತೆಯನ್ನು ಹೊಂದಿವೆ. ಅವುಗಳಿಗೆ ನಮ್ಮ ಸಂಸ್ಥೆ ಆದ್ಯತೆ ನೀಡಿ ಗ್ರಾಹಕರಿಗೆ ಪರಿಚಯಿಸುತ್ತಿದೆ’ ಎಂದರು.
‘ದಾಸ ಸಾಹಿತ್ಯದ ಮೇಲೆ ಒಂದು ಕಮ್ಮಟ, ವ್ಯಾಪಾರಿಗಳಿಗಾಗಿ ವಾಣಿಜ್ಯ ಕನ್ನಡ, ಮಾಧ್ಯಮದವರ ಭಾಷಾಶುದ್ಧತೆಯ ಕಮ್ಮಟಗಳನ್ನು ನಡೆಸಲೂ ಮುಳಿಯ ಪ್ರತಿಷ್ಠಾನ ಚಿಂತನೆ ನಡೆಸಿದೆ’ ಎಂದರು.
ರ‍್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಮಾತನಾಡಿ, ‘ ನಮ್ಮ ಭಾಷೆಯನ್ನು ಮಾತನಾಡಲು ನಮ್ಮ ತಾಯಂದಿರಿಗೇ ಕೀಳರಿಮೆ ಇದೆ. ಅದು ತೊಲಗಬೇಕು. ಮೊದಲು ನಮ್ಮ ಸಂಸ್ಕೃತಿಯ ಅದ್ಭುತಗಳನ್ನು ಅರಿತು ಮಕ್ಕಳಿಗೆ ಕಲಿಸಬೇಕು. ಈ ನಿಟ್ಟಿನಲ್ಲಿ ಲೇಖಕಿಯರ ಸಂಘ ಮುಳಿಯದಂತಹ ಸಂಸ್ಥೆಯೊಂದಿಗೆ ಕೈಜೋಡಿಸಿ ನಿರಂತರ ಶ್ರಮಿಸಲಿದೆ’
ಎಂದರು.
ಲಂಡನ್‌ನ ಲ್ಯಾಂಬೆತ್‌ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಮಾತನಾಡಿ, ‘ನಾನು ಕನ್ನಡದ ಪ್ರಮುಖ ಕವಯಿತ್ರಿ ಅಕ್ಕಮಹಾದೇವಿ ಅವರಿಂದ ಸ್ಫರ‍್ತಿ ಪಡೆದಿದ್ದೇನೆ. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗ ಪಕ್ಷಿಗಳಿಗೆ
ಅಂಜಿದೊಡೆಂತಯ್ಯಾ ಎಂಬ ಸಾಲಿನಂತೆ, ರಾಜಕಾರಣಕ್ಕೆ ಬಂದ ಮೇಲೆ ಟೀಕೆಗಳಿಗೆ ಅಂಜಬಾರದು ಎಂದು ಕಲಿತಿದ್ದೇನೆ’ ಎಂದರು.
‘ಲಂಡನ್‌ನಲ್ಲಿ ಕನ್ನಡ ಕಲಿಸುವ ಕೆಲಸ ಸಾಗಿದೆ. ಅನಿವಾಸಿ ಕನ್ನಡ ಲೇಖಕರ ಸಂಘ ಇದೆ. ಅಲ್ಲಿಯೂ ಸಾಕಷ್ಟು ಕೆಲಸಗಳಾಗಿವೆ. ನಾವು ಹಿಂದಿ ವಿರೋಧಿಗಳಲ್ಲ. ಆದರೆ, ಹಿಂದಿ ಜೊತೆಗೆ ಬೇರೆ ಭಾಷೆಗಳನ್ನೂ ಪ್ರೋತ್ಸಾಹಿಸಬೇಕು. ಅದಕ್ಕಾಗಿ ಸಂವಿಧಾನದ ೩೪೩ನೇ ವಿಧಿಯನ್ನು ತಿದ್ದಿಪಡಿ ಮಾಡಿ ಇತರ ಭಾಷೆಗಳಿಗೆ ಮಹತ್ವ ನೀಡುವಂತಾಗಲು ನಮ್ಮ ಜನಪ್ರತಿನಿಧಿಗಳು ಪ್ರಯತ್ನ ಮಾಡಬೇಕು’ ಎಂದರು.
ಕರ‍್ಯಕ್ರಮ ಸಂಯೋಜಕ ವೇಣು ರ‍್ಮಾ ತಮ್ಮ ಆಶಯ ಭಾಷಣದಲ್ಲಿ, ‘ಗುಡ್‌ಮರ‍್ನಿಂಗ್ ಅನ್ನುವುದು ನಮಸ್ಕಾರ ಆದಾಗ, ರೈಸ್ ಅನ್ನವಾದಾಗ, ರಸಂ ಸಾರು ಆದಾಗ ನಮ್ಮ ನಿತ್ಯ ಜೀವನವೂ ಕನ್ನಡಮಯವಾಗಿರುತ್ತದೆ. ಈ ಕೆಲಸ ಅಮ್ಮಂದಿರಿಂದಲೇ ಆರಂಭವಾಗಬೇಕು ಕನ್ನಡತನ ನಮ್ಮದಾಗಬೇಕು’ ಎಂದರು.,’
ಹಿರಿಯ ಸಾಹಿತಿ ನಾ.ದಾಮೋದರ ಶೆಟ್ಟಿ ಉಪಸ್ಥಿತರಿದ್ದರು. ಹೇಮಾ ವಿನಾಯಕ ಪಾಟೀಲ್ ಅವರು ಕಾರ್ಯಕ್ರಮದ ಆಶಯ ಸಾರುವ ನಾಡದೇವಿ ಭುವನೇಶ್ವರಿಯ ಚಿತ್ರ ಬಿಡಿಸಿದರು. ಲೇಖಕಿಯರ ಸಂಘ ಹಾಗೂ ಮುಳಿಯ ಪ್ರತಿಷ್ಠಾನದ ಪದಾಧಿಕಾರಿಗಳು.ಪ್ರತಿಷ್ಠಾನದ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್, ಲಂಡನ್, ಲ್ಯಾಂಬೆತ್‌ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್, ಡಾ.ಕಮಲಾ ಹಂಪನಾ, ಪ್ರೊ. ಭುವನೇಶ್ವರಿ ಹೆಗಡೆ ಉಪಸ್ಥಿತರಿದ್ದರು