ಪುತ್ತೂರು: ಕೇರಳದ ಸಮಗ್ರ ಕನ್ನಡ ಪರ ಸಂಘಟನೆಗಳ ಒಕ್ಕೂಟವಾದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ವತಿಯಿಂದ ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪುತ್ತೂರು ಕಹಳೆ ನ್ಯೂಸ್ ಕೇಬಲ್ ನೆಟ್‌ವರ್ಕ್‌ನ ಪ್ರಧಾನ ಸಂಪಾದಕ ಶ್ಯಾಮ ಸುದರ್ಶನ್ ಹೊಸಮೂಲೆ ಅವರಿಗೆ ಪ್ರದಾನ ಮಾಡಲಾಯಿತು.
ಗಡಿ ನಾಡ ಕನ್ನಡದ ಕುರಿತ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪತ್ರಿಕೋದ್ಯಮ ವಿಭಾಗದಲ್ಲಿ ಶ್ಯಾಮ ಸುದರ್ಶನ್ ಹೊಸಮೂಲೆಯವರಿಗೆ ಪ್ರದಾನ ಮಾಡಲಾಗಿದ್ದು, ಡಿ.5ರಂದು ಕಾಸರಗೋಡು ಹೊಸ ಬಸ್ ನಿಲ್ದಾಣದ ಬಳಿಯ ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಜರಗಿದ ಗಡಿನಾಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಎಡನೀರು ಮಠದ ಸಚ್ಚಿದಾನಂದ ಭಾರತೀ ಶ್ರೀಗಳು ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು. ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಸರ್ಕಾರದ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ. ಗಿರೀಶ್ ಉಪ್ಪಾರ, ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಮತ್ತು ಮಂಜೇಶ್ವರ ಶಾಸಕ ಅಶ್ರಫ್ ಮುಖ್ಯ ಅಭ್ಯಾಗತರಾಗಿದ್ದರು.
ಕೇರಳದ ಕನ್ನಡ ಪರ ಸಂಘಟನೆಗಳ ಒಕ್ಕೂಟವಾದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಸಂಸ್ಥಾಪಕ ಎಸ್.ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಚನಿಯಪ್ಪ ನಾಯ್ಕ ಎನ್, ಅಖಿಲೇಶ್ ನಗುಮುಗಂ, ಎ.ಆರ್. ಸುಬ್ಬಯ್ಯಕಟ್ಟೆ, ಮತ್ತಿತರರು ಉಪಸ್ಥಿತರಿದ್ದರು.
ಶ್ಯಾಮ್ ಸುದರ್ಶನ್ ಹೊಸಮೂಲೆರವರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.