ಕಾರ್ಕಳ: ಮೈಮೇಲೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆಗೈದಿದ್ದು, ಈ ಘಟನೆಗೆ ತನ್ನ ತಂದೆ ಹಾಗೂ ಸಂಬಂಧಿಕರ ಕಿರುಕುಳವೇ ಕಾರಣ ಎಂದು ಮಗಳು ದೂರು ನೀಡಿದ ಘಟನೆ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಗೀತಾ (68) ಎಂದು ಗುರುತಿಸಲಾಗಿದೆ.
ಸುರೇಂದ್ರ ಕುಡ್ವ ಹಾಗೂ ಗೀತಾ ದಂಪತಿ ಕಾರ್ಕಳ ಕುಂಟಲ್ಪಾಡಿಯ ಅತ್ರಿ ಅಪಾರ್ಟ್ ಮೆಂಟ್‌ನಲ್ಲಿ ವಾಸವಾಗಿದ್ದರು.
ಅವರ ಓರ್ವ ಮಗಳನ್ನು ಮೂಡುಬಿದ್ರೆಗೆ ಮದುವೆ ಮಾಡಿ ಕೊಟ್ಟಿದ್ದರು. ನ.6ರಂದು ಸುರೇಂದ್ರ ಕುಡ್ವ ಹತ್ತಿರದ ಫ್ಲಾಟ್‌ನವರು ಮೂಡಬಿದ್ರೆಯಲ್ಲಿರುವ ಮಗಳಿಗೆ ಫೋನ್ ಮಾಡಿ ನಿಮ್ಮ ತಾಯಿಗೆ ಬೆಂಕಿಯಿಂದ ಸುಟ್ಟ ಗಾಯಗಳಾಗಿರುವುದಾಗಿ ತಿಳಿಸಿದರು.
ತಕ್ಷಣ ತಾಯಿ ಗೀತಾ ಅವರನ್ನು ಕಾರ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಅದರಂತೆ ಅವರು ಕಾರ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಬಂದು ಮಗಳು ತನ್ನ ತಾಯಿಯಲ್ಲಿ ವಿಚಾರಿಸಿದಾಗ ‘ತಾನೇ ಬೆಂಕಿ ಹಚ್ಚಿಕೊಂಡೆ’ ಎಂದು ಅವರು ತಿಳಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನ.07 ರಂದು ತಾಯಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ಠಾಣೆಗೆ ದೂರು ನೀಡಿರುವ ಪುತ್ರಿ, ತನ್ನ ತಂದೆ ಸುಡುತ್ತಾ ಇರುವ ತನ್ನ ತಾಯಿಯನ್ನು ನೋಡಿಯೂ ಏನೂ ಮಾಡದೇ ಎದುರು ನಿಂತಿರುತ್ತಾರೆ ಎಂದು ಫ್ಲಾಟ್‌ನ ಮನೆಯವರು ಹೇಳಿರುವುದು ಅನುಮಾನ ಉಂಟುಮಾಡಿದೆ.
ಫ್ಲಾಟ್‌ನ ವಿಚಾರವಾಗಿ ಬಗ್ಗೆ ತಂದೆ ಹಾಗೂ ಅವರ ತಮ್ಮಂದಿರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಆದ್ದರಿಂದ ತಾಯಿಗೆ ಮಾನಸಿಕ ಕಿರುಕುಳ ಕೊಟ್ಟು ಈ ರೀತಿ ಮಾಡಿಕೊಳ್ಳುವ ಹಾಗೂ ತಂದೆ ಹಾಗೂ ಮನೆಯವರು ಪ್ರೇರೆಪಿಸಿರುವುದು ಸತ್ಯ. ಆದ್ದರಿಂದ ತಂದೆ ಸುರೇಂದ್ರ ಕುಡ್ವ,ಮತ್ತು ಅವರ ತಮ್ಮಂದಿರಾದ ನಿತ್ಯಾನಂದ ಕುಡ್ವ, ವಿಜೇಂದ್ರ ಕುಡ್ವ, ಮುಕುಂದ ಕುಡ್ವ, ಹಾಗೂ ತಂಗಿ ಪುಷ್ಪಲತಾ ಮೇಲೆ ಅನುಮಾನ ಇರುತ್ತದೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.