ಚಿತ್ರ : ಜೀತ್ ಸ್ಟುಡಿಯೋ
ಪುತ್ತೂರು:ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ 28ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಕರೆ ಮುಹೂರ್ತವು ಫೆ.8 ರಂದು ನಡೆಯಿತು.
ಕಂಬಳ ಸಮಿತಿಯ ಸಂಚಾಲಕರಾದ ಎನ್.ಸುಧಾಕರ್ ಶೆಟ್ಟಿಯವರು ಹಾರೆಯಲ್ಲಿ ಕರೆಯ ಮಣ್ಣು ತೆಗೆಯುವ ಮೂಲಕ ಕರೆ ಮುಹೂರ್ತ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಗ್ರಾಮೀಣ ಕ್ರೀಡೆ ಎನಿಸಿದ ಕಂಬಳವು ಪುತ್ತೂರಿನಲ್ಲಿ ಕಳೆದ 27 ವರ್ಷಗಳಿಂದ ಶ್ರೀ ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಯಶಸ್ವಿಯಾಗಿ ನಡೆಯುತ್ತಿದ್ದು, ಈ ಕಂಬಳವನ್ನು ವೀಕ್ಷಿಸಲು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳು ಆಗಮಿಸುತ್ತಿರುವುದೇ ಪುತ್ತೂರಿನ ಕಂಬಳದ ವೈಶಿಷ್ಟ್ಯವಾಗಿದೆ. ಮುಂಬರುವ ಮಾರ್ಚ್ ತಿಂಗಳಿನಲ್ಲಿ ನಡೆಯುವ ಪುತ್ತೂರಿನ ಕಂಬಳಕ್ಕೆ ಸರ್ವರು ಸಹಕಾರ ನೀಡಬೇಕು ಎಂದರು.
ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿಯವರು ಮಾತನಾಡಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪುತ್ತೂರಿನ ಕಂಬಳಕ್ಕೆ ವಿಶೇಷ ಸ್ಥಾನಮಾನವಿದೆ. ಜಯಕರ್ನಾಟಕ ಸಂಸ್ಥಾಪಕ ದಿ.ಮುತ್ತಪ್ಪ ರೈಯವರ ಸಾರಥ್ಯದಲ್ಲಿ ಪುತ್ತೂರಿನ ಕಂಬಳ ಯಶಸ್ವಿಯಾಗಿ ಮೂಡಿ ಬಂದಿದೆ. ಈ ಬಾರಿ ಮಾರ್ಚ್‌ನಲ್ಲಿ ನಡೆಯುವ ಕಂಬಳವನ್ನು ನಾವೆಲ್ಲರೂ ಒಗ್ಗಟ್ಟಾಗಿ ಯಶಸ್ವಿಗೊಳಿಸಬೇಕಿದೆ ಎಂದು ಹೇಳಿ ಸರ್ವರ ಸಹಕಾರ ಕೋರಿದರು.
ಕರೆ ಮುಹೂರ್ತದ ಮೊದಲು ಸಂಚಾಲಕ ಎನ್.ಸುಧಾಕರ್ ಶೆಟ್ಟಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಸೇರಿದಂತೆ ಕಂಬಳ ಸಮಿತಿಯ ಸದಸ್ಯರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿದರು. ಬಳಿಕ ದೇವಳದ ಗದ್ದೆಯಲ್ಲಿರುವ ನಾಗನ ಕಟ್ಟೆ ಸನ್ನಿಧಾನಕ್ಕೆ ತೆರಳಿ ಅಲ್ಲಿಯೂ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯದರ್ಶಿ ದಿನೇಶ್ ಕುಲಾಲ್, ಪ್ರಮುಖರಾದ ನಿರಂಜನ್ ರೈ ಮಠಂತಬೆಟ್ಟು, ಮುರಳೀಧರ ರೈ ಮಠಂತಬೆಟ್ಟು, ಕೃಷ್ಣಪ್ರಸಾದ್ ಆಳ್ವ ಸುದರ್ಶನ್ ನ್ಯಾಕ್ ಕಂಪ, ಗಣೇಶ್ ಶೆಟ್ಟಿ ದರ್ಬೆ, ನವೀನ್‌ಚಂದ್ರ ನ್ಯಾಕ್ ಬೆದ್ರಾಳ, ಮಂಜುನಾಥ ಗೌಡ ತೆಂಕಿಲ, ಉಮೇಶ್ ಕರ್ಕೇರಾ, ಬಿ.ಎನ್ ರಾಜೇಶ್, ಜಿನ್ನಪ್ಪ ಪೂಜಾರಿ ಮುರ, ಪ್ರಶಾಂತ್ ಮುರ, ಜೋಕಿಂ ಡಿ’ಸೋಜ ಬನ್ನೂರು, ರಮೇಶ್ ಬನ್ನೂರು, ಯೋಗಿಶ್ ಸಾಮಾನಿ, ವಿಕ್ರಂ ಶೆಟ್ಟಿ ಅಂತರ, ಪ್ರೇಮಾನಂದ ನ್ಯಾಕ್, ಸುಧಾಕರ್ ಆಚಾರ್, ಶಶಿಧರ್ ನೆಲ್ಲಿಕಟ್ಟೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.