ಮಂಗಳೂರು: ಪತ್ನಿಯ ಕೊಲೆ ಯತ್ನ ಮತ್ತು ಜೀವ ಬೆದರಿಕೆ ಹಾಕಿದ ಆರೋಪಿಗೆ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 3 ವರ್ಷಗಳ ಸಾದಾ ಶಿಕ್ಷೆ ಮತ್ತು ಮತ್ತು 1,00000 ರೂ. ದಂಡವನ್ನು ವಿಧಿಸಿ ಬುಧವಾರ ತೀರ್ಪು ನೀಡಿದೆ.
ಈ ಹಿಂದೆ ತೊಕ್ಕೊಟು ಸಮೀಪದ ಕುಂಪಲ ಕಷ್ಣ ಮಂದಿರ ಬಳಿಯ ಮೂರುಕಟ್ಟೆಯ ನಿವಾಸಿಯಾಗಿದ್ದ ಪ್ರಸ್ತುತ ನಗರದ ಅತ್ತಾವರ ನಿವಾಸಿ ವಿನೋದ್ (36) ಶಿಕ್ಷೆಗೊಳಗಾದ ಆರೋಪಿ.
ಪ್ರಕರಣದ ಹಿನ್ನೆಲೆ:
ಆರೋಪಿ ವಿನೋದ್ ತನ್ನ ಪತ್ನಿ ಮತ್ತು ಮಕ್ಕಳ ಜೊತೆ ಅತ್ತಾವರದ ಬಾಡಿಗೆ ಮನೆಯಲ್ಲಿದ್ದ. ಆದರೆ ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದ್ದರಿಂದ ಕೆಲಸಕ್ಕೆ ಹೋಗುವಂತೆ ಪತ್ನಿ ಗಂಡನಿಗೆ ಬುದ್ಧಿವಾದ ಹೇಳಿದ್ದಳು.
ಇದರಿಂದ ಕುಪಿತಗೊಂಡ ಆರೋಪಿ ನನಗೆ ಕೆಲಸಕ್ಕೆ ಹೋಗು ಎಂದು ಹೇಳಲು ನೀನು ಯಾರು ಎಂದು ಪತ್ನಿಗೆ ಹೊಡೆದು ಮನೆ ಬಿಟ್ಟು ಹೋಗಿದ್ದ. ಎ.27ರಂದು ಪುನ: ಮನೆಗೆ ಬಂದಾಗ ಪತ್ನಿ ತರಾಟೆಗೆ ತೆಗೆದುಕೊಂಡಿದ್ದಳು. ಇದರಿಂದ ಕೋಪಗೊಂಡ ವಿನೋದ್ ಪತ್ನಿಯ ಹೊಟ್ಟೆಗೆ ಚೂರಿಯಿಂದ ಇರಿಯಲು ಮುಂದಾಗಿದ್ದನು ಎಂದು ಆರೋಪಿಸಲಾಗಿತ್ತು.
ಆದರೆ ಆಕೆ ತಡೆಯಲು ಯತ್ನಿಸಿದಾಗ ಚೂರಿ ಬೆನ್ನಿಗೆ ತಗುಲಿ ಗಾಯವಾಗಿತ್ತು. ಬಳಿಕ ಆರೋಪಿ ಜೀವ ಬೆದರಿಕೆ ಹಾಕಿ ಮನೆ ಬಿಟ್ಟು ಹೋಗಿದ್ದನು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಆರೋಪಿ ವಿನೋದ್ ಈ ಹಿಂದೆ ಇನ್ನೊಬ್ಬಳನ್ನು ಮದುವೆ ಆಗಿರುವ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದ ವಿಷಯವೂ ಬೆಳಕಿಗೆ ಬಂದಿದೆ.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ ಬಿ. ಆರೋಪಿಯ ಮೇಲಿದ್ದ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಕೊಲೆ ಯತ್ನ (ಐಪಿಸಿ 307) ಆರೋಪಕ್ಕೆ 3 ವರ್ಷಗಳ ಸಾದಾ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ಹಾಗೂ ಕೊಲೆ ಬೆದರಿಕೆ (ಐಪಿಸಿ 506) ಆರೋಪಕ್ಕೆ 1 ವರ್ಷ ಸಾದಾ ಸಜೆ ಮತ್ತು 5,000 ರೂ. ದಂಡ ವಿಧಿಸಿ ಈ ಎರಡೂ ಶಿಕ್ಷೆಗಳನ್ನು ಏಕ ಕಾಲದಲ್ಲಿ ಅನುಭವಿಸುವಂತೆ ನಿನ್ನೆ ತೀರ್ಪು ನೀಡಿದ್ದಾರೆ.
ದಂಡ ಮೊತ್ತದಲ್ಲಿ 1 ಲಕ್ಷ ರೂ.ವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕೂಡಾ ಆಕೆಗೆ ಸೂಕ್ತ ಪರಿಹಾರ ಒದಗಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ 13 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, 20 ದಾಖಲೆಗಳನ್ನು ಗುರುತಿಸಲಾಗಿತ್ತು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ಗಳಾದ ಬಿ. ಶೇಖರ ಶೆಟ್ಟಿ ಮತ್ತು ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು.