ಬೆಟ್ಟಂಪಾಡಿ: ಸ.ಪ್ರ.ದ.ಕಾಲೇಜು, ಬೆಟ್ಟಂಪಾಡಿ ಇಲ್ಲಿನ ವಿಜ್ಞಾನ ಸಂಘ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ‘ಆಕಾಶ ವೀಕ್ಷಣೆ’ ಕಾರ್ಯಕ್ರಮವನ್ನು ಡಿ.08 ರಂದು ಆಯೋಜಿಸಲಾಗಿತ್ತು.
ಸೂರ್ಯಾಸ್ತದ ನಂತರ ಪಶ್ಚಿಮ ಆಕಾಶದಲ್ಲಿ ಚಂದ್ರ ಹಾಗೂ ಶುಕ್ರ, ಗುರು ಮತ್ತು ಶನಿ ಗ್ರಹಗಳು ಪ್ರಕಾಶಮಾನವಾಗಿ ಕಾಣಿಸುತ್ತಿದ್ದು, ಈ ಅಪೂರ್ವವಾದ ಮತ್ತು ವಿಸ್ಮಯ ದೃಶ್ಯವನ್ನು ಟೆಲಿಸ್ಕೋಪ್ ಮೂಲಕ ವೀಕ್ಷಿಸಲು ಕಾಲೇಜಿನ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಗಂಟೆ 6:00 ಕ್ಕೆ ಆರಂಭವಾದ ಈ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋ಼ಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಉದಯರಾಜ್ ಎಸ್ ಇವರು ಆಕಾಶ ವೀಕ್ಷಣೆ ಕಾರ್ಯಕ್ರಮದ ಮಹತ್ವ ಹಾಗೂ ವಿಶೇಷತೆಯನ್ನು ವಿವರಿಸುತ್ತಾ, ಸೌರಮಂಡಲದ ವಿವಿಧ ಗ್ರಹಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿ, ಅವುಗಳನ್ನು ರಾತ್ರಿ ಆಗಸದಲ್ಲಿ ಗುರುತಿಸುವ ಬಗ್ಗೆ ತಿಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಬಾಲಚಂದ್ರ, ಶುಕ್ರ, ಶನಿ ಹಾಗೂ ಗುರು ಗ್ರಹಗಳನ್ನು ದೂರದರ್ಶಕದ ಮೂಲಕ ವೀಕ್ಷಿಸಿ ಪುಲಕಿತರಾದರು.
ಸಂಜೆಯ ವೇಳೆ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವರದರಾಜ ಚಂದ್ರಗಿರಿ, ಐಕ್ಯೂಎಸಿ ಸಂಚಾಲಕರಾದ ಹರಿಪ್ರಸಾದ್ ಎಸ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದಾಮೋದರ ಕಣಜಾಲು, ಸಾಂಸ್ಕೃತಿಕ ಸಂಘದ ಮುಖ್ಯಸ್ಥರಾದ ದೀಕ್ಷಿತ್ ಕುಮಾರ್ ಹಾಗೂ ಕಾಲೇಜು ಗ್ರಂಥಪಾಲಕರಾದ ರಾಮ ಕೆ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿ ಹಾಗೂ ಕುತೂಹಲದಿಂದ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.