ಉಪ್ಪಿನಂಗಡಿ: ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿ ರಸ್ತೆ ಮಧ್ಯೆ ಬಿದ್ದಿದ್ದು,ಅಪಘಾತಕ್ಕೀಡಾದ ಕಾರಿನ ಹಿಂದೆ ಬರುತ್ತಿದ್ದ ಇನ್ನೊಂದು ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಗುಚಿ ಬಿದ್ದು ಸರಣಿ ಅಪಘಾತ ಸಂಭವಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ಪಂಜಾಲ ಎಂಬಲ್ಲಿ ನಡೆದಿದೆ.
ಅಪಘಾತದಿಂದಾಗಿ 3 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೆಲ್ಕಾರ್ ಕಡೆಯಿಂದ ನೆಲ್ಯಾಡಿ ಕಡೆ ಹೋಗುತ್ತಿದ್ದ ಎಕ್ಸ್‌ಯು-500 ಕಾರಿಗೆ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದ್ದು, ಕಾರು ಚಲಾಯಿಸಿಕೊಂಡು ಬರುತ್ತಿದ್ದ ನೆಲ್ಯಾಡಿಯಲ್ಲಿ ಹೊಟೇಲ್ ಹೊಂದಿರುವ ಮೆಲ್ಕಾರ್ ನಿವಾಸಿ ಸಂತೋಷ್ ಎಂಬವರು ಸಣ್ಣಪುಟ್ಟ ತರಚಿದ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಲಾರಿ ಚಾಲಕ ತಮಿಳುನಾಡು ನಿವಾಸಿ ಶೀತಲ್ ಮತ್ತು ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಯ ಚಾಲಕ ಬೆಂಗಳೂರು ಅತ್ತಿಬೆಲೆ ನಿವಾಸಿ ಹೇಮಂತ್ ಗಾಯಗೊಂಡಿದ್ದು, ಇಬ್ಬರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.