ಬಂಟ್ವಾಳ: ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುವ ವೈದ್ಯಕೀಯ ಶಿಬಿರಗಳು ಸಹಕಾರಿಯಾಗಿದೆ ಎಂದು ಮಜಿ ಶಾಲೆಯ ದತ್ತು ಸಂಸ್ಥೆ ಮಾತ ಡೆವಲಪರ್ಸ್ ಸುರತ್ಕಲ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಸಂತೋಷ್ ಕುಮಾರ್ ಶೆಟ್ಟಿ ಹೇಳಿದರು.
ಆಲ್ ಕಾರ್ಗೋ ಲಾಜಿಸ್ಟಿಕ್ ಸಂಸ್ಥೆ ಮಂಗಳೂರು, ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು, ರೋಟರಿ ಕ್ಲಬ್ ಬಿ.ಸಿ.ರೋಡು ಸಿಟಿ ಹಾಗೂ ಶಾಲಾ ದತ್ತು ಸಂಸ್ಥೆ ಹಾಗೂ ಶತಮಾನೋತ್ಸವ ಆಚರಣಾ ಸಮಿತಿ ಸರಕಾರಿ ಪ್ರಾಥಮಿಕ ಶಾಲೆ ಮಜಿ ವೀರಕಂಭ ಹಾಗೂ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇವರ ಸಹಯೋಗದೊಂದಿಗೆ ಮಜಿ ವೀರಕಂಬ ಶಾಲೆಯಲ್ಲಿ ಗುರುವಾರ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರ ಆರೋಗ್ಯಕ್ಕೆ ಆದ್ಯತೆ ನೀಡಿ ಶಿಬಿರ ಆಯೋಜಿಸಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಮಜಿ ಶಾಲೆಗೆ ಬರುವ ಮಕ್ಕಳ ಹಾಗೂ ಅವರ ಪೋಷಕರ ಆರೋಗ್ಯದ ರಕ್ಷಣೆಗೆ ಮಾತ ಡೆವಲಪರ್ಸ್ ಬದ್ಧವಾಗಿದ್ದು, ಇದರ ಅಂಗವಾಗಿ ಮಜಿ ಶಾಲೆಗೆ ದಾಖಲಾದ ಎಲ್ಲಾ ಮಕ್ಕಳಿಗೂ ಹಾಗೂ ಅವರ ಪೋಷಕರಿಗೆ ಸಂಸ್ಥೆಯ ವತಿಯಿಂದ ಉಚಿತವಾಗಿ ಕೆ ಎಂ ಸಿ ಆಸ್ಪತ್ರೆಯ ರಾಯಲ್ಟಿ ಕಾರ್ಡ್ ಒದಗಿಸಿಕೊಡಲಾಗುವುದು ಎಂದು ಅವರು ಹೇಳಿದರು.
ಪ್ರಜ್ಞಾಸಲಹಾ ಕೇಂದ್ರ ಮಂಗಳೂರು ಇದರ ಯೋಜನಾ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್ ರವರು, ಪ್ರಸ್ತಾವನೆಯೊಂದಿಗೆ ಆರೋಗ್ಯ ಶಿಬಿರದ ಉದ್ದೇಶವನ್ನು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ,ರೋಟರಿ ಕ್ಲಬ್ ಬಿಸಿರೋಡು ಸಿಟಿ ಇದರ ಅಧ್ಯಕ್ಷರಾದ ರೊ. ಸತೀಶ್ ಕುಮಾರ್ ಕೆ ಮಾತನಾಡಿ, ಸಮುದಾಯದ ಜನರ ಉತ್ತಮ ಆರೋಗ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ ಉದ್ದೇಶವನ್ನಿಟ್ಟುಕೊಂಡು ಆಯೋಜಿಸುವ ಆರೋಗ್ಯ ಶಿಬಿರವು ಬಹು ಪ್ರಾಮುಖ್ಯವಾಗಿದೆ ಎಂದರು.
ಕೆಎಂಸಿ ಆಸ್ಪತ್ರೆಯ ಆರ್.ಎಂ.ಸಿ. ಸಂಯೋಜಕ ಕಾರ್ತಿಕ್ ರವರು,ಆಸ್ಪತ್ರೆಯ ರಾಯಲ್ಟಿ ಕಾರ್ಡು ಮತ್ತು ಹಸಿರು ಕಾರ್ಡ್ ಯೋಜನೆಯಡಿ ದೊರೆಯುವ ಸೌಲಭ್ಯಗಳ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
ರೋಟರಿ ಕ್ಲಬ್ ಬಂಟ್ವಾಳ ಸಿಟಿ ಇದರ ಜಿ.ಎಸ್.ಆರ್. ಪದ್ಮನಾಭ ರೈ ಮಾತನಾಡಿ, ಪ್ರಸ್ತುತ ಕೊರೋನಾ ಕಾಲಘಟ್ಟದಲ್ಲಿ ಮಾಹಿತಿ ಮತ್ತು ಆರೋಗ್ಯ ಶಿಬಿರವು ತೀರಾ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಮಾತನಾಡಿ, ಗ್ರಾಮೀಣ ಮಟ್ಟದ ಜನರ ಆರೋಗ್ಯದ ಸುರಕ್ಷತೆಯ ಉದ್ದೇಶದ ಉಚಿತ ಆರೋಗ್ಯ ಶಿಬಿರಕ್ಕೆ ವೀರಕಂಭ ಗ್ರಾಮ ವನ್ನು ಆಯ್ಕೆ ಮಾಡಿರುವುದಕ್ಕೆ ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಮಜಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯ ಮೇಲ್ವಿಚಾರಕಿ ಶ್ರೀಮತಿ ಸುಗುಣ ಶೆಟ್ಟಿ, ವೀರಕಂಭ ಒಕ್ಕೂಟ ಅಧ್ಯಕ್ಷ ಶ್ರೀಮತಿ ಶಾಂಭವಿ, ರೋಟರಿ ಕ್ಲಬ್ ಬಂಟ್ವಾಳ ಸಿಟಿ ಇದರ ರೊ. ಪ್ರಶಾಂತ್ ಕಾರಂತ್, ರೊ. ಸಂದೀಪ್ ಕುಮಾರ್ ಶೆಟ್ಟಿ ಅರೆಬೆಟ್ಟು ಉಪಸ್ಥಿತರಿದ್ದರು.
ಮಜಿ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಎಸ್. ಕೆ ಸ್ವಾಗತಿಸಿ, ಶಾಲಾ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ಈಶ್ವರ ಭಟ್ ನಗ್ರಿಮೂಲೆ ವಂದಿಸಿದರು. ಪ್ರಜ್ಞಾ ಸಲಹಾ ಕೇಂದ್ರದ ವಲಯ ಸಂಯೋಜಕ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.
ರೋಟರಿ ಕ್ಲಬ್ ಬಿಸಿರೋಡ್ ಸಿಟಿ ಇದರ ವತಿಯಿಂದ ಶಿಬಿರದಲ್ಲಿ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಿನ್ನಾ ಮೈರ ಕಾರ್ಯಕ್ರಮ ಸಂಘಟನೆಗೆ ಸಹಕರಿಸಿದರು.