ಪುತ್ತೂರು: ಮಹಿಳೆಯೋರ್ವರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ ಘಟನೆ ಕೆದಂಬಾಡಿ ಗ್ರಾಮದ ತಿಂಗಳಾಡಿ ಕೊಡಂಗೋಣಿಯ ಎಂಬಲ್ಲಿ ನಡೆದಿದೆ.
ಬಂಧಿತರನ್ನು ಕೆದಂಬಾಡಿ ಗ್ರಾಮದ ಬೋಳೋಡಿ ಸಮೀಪದ ಕೊಡಂಗೋಣಿ ನಿವಾಸಿಗಳಾದ ಚಂದ್ರಶೇಖರ ಕೊಡಂಗೋಣಿ ಮತ್ತು ಜಗದೀಶ ಕೊಡಂಗೋಣಿ ಎನ್ನಲಾಗಿದೆ.
ಆರೋಪಿಗಳ ವಿರುದ್ಧ ಸುಳ್ಯ ತಾಲೂಕು ಕೋಡಿಯಾಲ ನಿವಾಸಿ ಶರತ್ ಕುಮಾರ್ ದೂರು ನೀಡಿದ್ದಾರೆ.
ತಿಂಗಳಾಡಿ ನಿವಾಸಿ ಮಹಿಳೆಯೋರ್ವರನ್ನು ಆರೋಪಿಗಳ ಪೈಕಿ ಓರ್ವ ಪ್ರೀತಿ ಮಾಡುತ್ತಿದ್ದ, ಅದೇ ಮಹಿಳೆಗೆ ಬೇರೊಬ್ಬರ ಜೊತೆ ಪ್ರೇಮ ಇದ್ದ ಕಾರಣ ಈತನ ಪ್ರೀತಿಯನ್ನು ನಿರಾಕರಿಸಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಮತ್ತು ಆರೋಪಿ ನಡುವೆ ವಾಗ್ವಾದ ಮತ್ತು ಮೊಬೈಲ್ ನಲ್ಲಿ ಮಾತಿನ ಚಕಮಕಿ ನಡೆದಿತ್ತು.
ಆ ಬಳಿಕ ಆರೋಪಿಗಳಿಬ್ಬರು ಮಾತುಕತೆ ನಡೆಸಲು ತಿಂಗಳಾಡಿಗೆ ಬರಲು ಹೇಳಿ, ಬಳಿಕ ಮಹಿಳೆಯನ್ನು ಇಬ್ಬರು ಸೇರಿ ಅಪಹರಣ ಮಾಡಿ ಮನೆಯೊಂದರಲ್ಲಿ ಕೂಡಿ ಹಾಕಿದ್ದರು. ಈ ಕುರಿತು ಮಾಹಿತಿ ಬಂದ ಆಧಾರದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಅಪಹರಣ ಮಾಡಿದ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಠಾಣೆಯಲ್ಲಿ ಐಪಿಸಿ ಸೆಕ್ಷನ್ 341, 506, 363, 342 ಜೊತೆಗೆ 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.



























