ಪುತ್ತೂರು: ಡಾ. ಶಿವರಾಮ ಕಾರಂತರು ನಾಟ್ಯ ತರಬೇತಿ ನೀಡುತ್ತಿದ್ದ 156 ವರ್ಷಗಳ ಪುರಾತನ ಕಟ್ಟಡ ರಾತ್ರೋರಾತ್ರಿ ನೆಲಸಮ ಮಾಡಿರುವ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸಲು ದ.ಕ ಜಿಲ್ಲಾಧಿಕಾರಿ ಅವರು ಡಿಡಿಪಿಐ ಹಾಗೂ ಜಿ.ಪಂ ಸಿ ಇಓ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ತೂರು ಹೃದಯಭಾಗದಲ್ಲಿರುವ ಸರಕಾರಿ ಶಾಲೆಯ ಪ್ರಾಚೀನ ಕಟ್ಟಡ ಇದಾಗಿದ್ದು, 1865ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಆರಂಭಿಸಿದ ಲಂಡನ್ ಥಿಯೇಟರ್ ಮಾದರಿ ಶಾಲೆ ಇದಾಗಿತ್ತು.
ಪುತ್ತೂರು ಹಾಗೂ ಅಕ್ಕಪಕ್ಕ ೨-೩ ತಾಲೂಕುಗಳಲ್ಲೂ ಶಾಲೆಯೇ ಇಲ್ಲದಿರುವ ಸಂದರ್ಭ ಬ್ರಿಟಿಷ್ ಸರ್ಕಾರ ಮೊತ್ತ ಮೊದಲು ಪುತ್ತೂರಿನ ಹೃದಯಭಾಗದಲ್ಲಿ ಶಾಲೆ ನಿರ್ಮಿಸಿತ್ತು. ಪ್ರಾಚೀನ ಪಾರಂಪರಿಕ ಕಟ್ಟಡಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಈ ಕಟ್ಟಡದ ಪುನರುತ್ಥಾನ ಮಾಡಬೇಕೆಂದು ದಶಕಗಳಿಂದ ಬೇಡಿಕೆ ನೀಡುತ್ತಿದ್ದರು.
ಡಾ. ಶಿವರಾಮ ಕಾರಂತರು 83 ವರ್ಷಗಳ ಹಿಂದೆ ನಾಟ್ಯ ನಿರ್ದೇಶನವನ್ನು ಮಾಡುತ್ತಿದ್ದರು. ಆದರೆ ಡಿ.11 ರಂದು ಎಸ್ ಡಿ ಎಂ ಸಿ ಕಟ್ಟಡ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ನೆಲಸಮ ಮಾಡಿತ್ತು. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.
ಜಿಲ್ಲಾಧಿಕಾರಿ ಸೂಚನೆಯಂತೆ ಡಿಡಿಪಿಐ ಘಟನೆ ಬಗ್ಗೆ ವರದಿ ನೀಡುವಂತೆ ಬಿಇಓ ಲೋಕೇಶ್ ರವರಿಗೆ ಸೂಚಿಸಿದ್ದು, ಅವರು ಎಸ್ ಡಿಎಂಸಿ ಹಾಗೂ ಮುಖ್ಯ ಶಿಕ್ಷರಿಗೆ ನೋಟೀಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.