ಮಂಗಳೂರು: ಶ್ರೀ ಕಾರಿಂಜೇಶ್ವರ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ನ.21ರಂದು ಪ್ರತಿಭಟನೆ ನಡೆಸಿ ಒಂದು ತಿಂಗಳ ಗಡುವು ನೀಡಿದ್ದೆವು.
ಆ ಆಗ್ರಹಕ್ಕೆ ಏನೂ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಇದೇ ಡಿ.21ರಂದು ಹಿಂಜಾವೇ ನೇತೃತ್ವದಲ್ಲಿ ರುದ್ರಗಿರಿಯ ಭಕ್ತರ ನಡಿಗೆ ಜಿಲ್ಲಾಧಿಕಾರಿ ಕಚೇರಿಯ ಕಡೆಗೆ ಆಯೋಜಿಸಿದ್ದೇವೆ ಎಂದು ಹಿಂಜಾವೇ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಕೃಷ್ಣ ಅಡ್ಯಂತಾಯ ತಿಳಿಸಿದ್ದಾರೆ.
ಈ ಬಗ್ಗೆ ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಗಿನ ಗೃಹಸಚಿವ ದಿ.ವಿ.ಎಸ್ ಆಚಾರ್ಯ ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಬಂದು ಕ್ಷೇತ್ರದ 10 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸದಂತೆ ಜಿಲ್ಲಾಧಿಕಾರಿಗೆ ಪತ್ರ ಕಳುಹಿಸಿದ್ದಾರೆ. ಅದಾದ ನಂತರ ಅದು ಸ್ಥಗಿತಗೊಂಡಿತ್ತು. ನಂತರ ಮತ್ತೆ ಪ್ರಾರಂಭವಾಗಿದೆ.
ಅಕ್ರಮ ಗಣಿಗಾರಿಕೆ ವಿರುದ್ಧ ಸ್ಥಳೀಯ ಸಂಘಟನೆಗಳು ಹಲವು ಪ್ರತಿಭಟನೆ ನಡೆದಿವೆ. ಜೊತೆಗೆ ಪರಿಸರ, ಗಣಿಗಾರಿಕೆ ಹಾಗೂ ಕಂದಾಯ ಇಲಾಖೆಗೆ, ಜಿಲ್ಲಾಧಿಕಾರಿಗೂ ದೂರು ನೀಡಿದ್ದೇವೆ. ಆದರೆ ಈವರೆಗೂ ನಾವು ಮಾಡಿದ ಹೋರಾಟ ನೀರಿನಲ್ಲಿ ಹೋಮಯಿಟ್ಟ ಹಾಗೇ ಆಗಿದೆ. ಎಲ್ಲಾ ಇಲಾಖೆಗಳು ಒಟ್ಟಾಗಿ ಸೇರಿ ಗಣಿ ಮಾಫಿಯಾ ಮಾಡಿದೆ ಎಂದು ಆರೋಪಿಸಿದರು.
ಬಂಟ್ವಾಳದಲ್ಲಿ ನ.21ರಂದು ರುದ್ರಗಿರಿಯ ರಣಕಹಳೆ ಎಂಬ ಪ್ರತಿಭಟನಾ ಸಮಾವೇಶದ ವೇಳೆ 1 ತಿಂಗಳ ಗಡುವು ನೀಡಿದ್ದೆವು.ಆ ಆಗ್ರಹಕ್ಕೆ ಏನೂ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಡಿ.21ರಂದು ಜಿಲ್ಲೆಯ ವಿವಿಧ ಭಾಗಗಳಿಂದ ಮಂಗಳೂರು ನಗರಕ್ಕೆ ಬಂದು ಜಿಲ್ಲಾಧಿಕಾರಿಯ ಕಚೇರಿಗೆ ನಡಿಗೆ ಮೂಲಕ ಹೋಗಿ ಜಿಲ್ಲಾಧಿಕಾರಿಗೆ ಮನವಿ ನೀಡಲಿದ್ದೇವೆ ಎಂದರು.