ಮುಂಬೈ: ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ್ದ ‘ಪನಾಮ ಪೇಪರ್ಸ್’ ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಇಂದು ಲೋಕನಾಯಕ್ ಭವನದಲ್ಲಿ ಇಡಿ (ಜಾರಿ ನಿರ್ದೇಶನಾಲಯ) ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಪನಾಮ ಪೇಪರ್ಸ್ ಪ್ರಕರಣದಲ್ಲಿ ಭಾರತದ ಸುಮಾರು 500 ಜನರು ಭಾಗಿಯಾಗಿದ್ದಾರೆ. ಹೆಸರಾಂತ ರಾಜಕೀಯ ನಾಯಕರು, ನಟರು, ಕ್ರೀಡಾಪಟುಗಳು, ಉದ್ಯಮಿಗಳ ಮೇಲೆ ತೆರಿಗೆ ವಂಚನೆ ಆರೋಪ ಕೇಳಿ ಬಂದಿದೆ. ಅದರ ಭಾಗವಾಗಿ ಐಶ್ವರ್ಯಾ ರೈ ಅವರಿಗೆ ಸಮನ್ಸ್ ನೀಡಲಾಗಿದ್ದು ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
2016ರಲ್ಲಿ ಪನಾಮ ಮೂಲದ ಕಾನೂನು ಸಂಸ್ಥೆಯೊಂದರ 11.5 ಕೋಟಿ ತೆರಿಗೆ ದಾಖಲೆಗಳು ಯುಕೆಯಲ್ಲಿ ಸೋರಿಕೆಯಾಗಿದ್ದವು. ಇದರಲ್ಲಿ ಪ್ರಪಂಚದಾದ್ಯಂತದ ದೊಡ್ಡ ನಾಯಕರು, ಉದ್ಯಮಿಗಳು ಮತ್ತು ದೊಡ್ಡ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸಲಾಗಿತ್ತು. ಇದರಲ್ಲಿ ಬಚ್ಚನ್ ಕುಟುಂಬದ ಹೆಸರು ಕೇಳಿ ಬಂದಿತ್ತು. ವರದಿಯ ಪ್ರಕಾರ ಅಮಿತಾಭ್ ಬಚ್ಚನ್ ಅವರನ್ನು 4 ಕಂಪನಿಗಳ ನಿರ್ದೇಶಕರನ್ನಾಗಿ ಮಾಡಲಾಗಿದೆ. ಇವುಗಳಲ್ಲಿ, ಮೂರು ಬಹ್ಮಾಸ್‌ನಲ್ಲಿದ್ದರೆ, ಒಂದು ವರ್ಜಿನ್ ದ್ವೀಪಗಳಲ್ಲಿತ್ತು.
ಪ್ರಕರಣದ ತನಿಖೆ ಸುದೀರ್ಘವಾಗಿ ನಡೆಯುತ್ತಿದೆ. ಇಡಿ ಅಧಿಕಾರಿಗಳು ದೇಶದ ಹಲವು ದೊಡ್ಡ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಿದ್ದಾರೆ. ಅದರಂತೆ ಕೆಲವು ದಿನಗಳ ಹಿಂದೆ ಅಭಿಷೇಕ್ ಬಚ್ಚನ್ ಕೂಡ ಇಡಿ ವಿಚಾರಣೆಯನ್ನು ಎದುರಿಸಿದ್ದರು. ಈ ವೇಳೆ ಅವರು ಕೆಲವು ದಾಖಲೆಗಳನ್ನು ಇಡಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಇಡಿ ನೋಟಿಸ್ ನೀಡುವ ಮೂಲಕ ಶೀಘ್ರದಲ್ಲೇ ಅವರ ತಂದೆ ಅಮಿತಾಬ್ ಬಚ್ಚನ್ ಅವರನ್ನೂ ವಿಚಾರಣೆಗೆ ಕರೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.