ಮಂಗಳೂರು: ಮೀನುಗಾರಿಕಾ ಬೋಟ್ ನಲ್ಲಿ ಮೊಬೈಲ್ ಕದ್ದನೆಂಬ ಆರೋಪದಲ್ಲಿ ಮಂಗಳೂರಿನ ಮೀನುಗಾರಿಕಾ ಬಂದರು ದಕ್ಕೆಯಲ್ಲಿ ವ್ಯಕ್ತಿಯೊಬ್ಬನನ್ನು ಉಲ್ಟಾ ನೇತು ಹಾಕಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರು ಜನರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೊಂಡೂರು ಪೋಲಯ್ಯ (23), ಅವುಲ ರಾಜ್‌ಕುಮಾರ್ (26), ಕಾಟಂಗರಿ ಮನೋಹರ್ (21), ವೂಟುಕೋರಿ ಜಾಲಯ್ಯ (30), ಕರಪಿಂಗಾರ ರವಿ(27), ಪ್ರಲಯಕಾವೇರಿ ಗೋವಿಂದಯ್ಯ(47) ಎಂದು ಗುರುತಿಸಲಾಗಿದೆ.
ಡಿ.14ರಂದು ರಾತ್ರಿ ಆಂಧ್ರಪ್ರದೇಶ ಮೂಲದ ವೈಲ ಶೀನು ಧಕ್ಕೆಯಲ್ಲಿ ನಿಲ್ಲಿಸಿದ್ದ ತಾನು ಕೆಲಸ ಮಾಡುತ್ತಿದ್ದ ಬೋಟಿನಲ್ಲಿ ಮಲಗಿದ್ದನು.
ಮರುದಿನ ಆರು ಜನ ಆರೋಪಿಗಳು ಏಕಾಏಕಿ ಬಂದು ನಿನ್ನೆ ರಾತ್ರಿ ಬೋಟಿಗೆ ಬಂದವನು ಕಳ್ಳತನ ಮಾಡಿದ್ದೀಯಾ ಎಂದು ಗದರಿಸಿದ್ದಾರೆ. ನಂತರ ವೈಲಾನನ್ನು ಅಪಹರಿಸಿ ಕೈಕಾಲು ಕಟ್ಟಿ, ಬೊಬ್ಬೆ ಹಾಕದಂತೆ ಬಾಯಿ ಮುಚ್ಚಿಬೀಟಿನ ಆರಿಯ ಕೊಕ್ಕೆಗೆ ಸಿಕ್ಕಿಸಿ ತಲೆಕೆಳಗೆ ಮಾಡಿ ನೇತಾಡಿಸಿದ್ದಾರೆ. ನಂತರ ಮರದ ರೀಪು ಹಾಗೂ ಕಬ್ಬಿಣದ ಸರಪಳಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಇದಾದ ನಂತರ ಆತನನ್ನು ಸಮುದ್ರಕ್ಕೆ ಬಿಸಾಕಿ ಕೊಲೆ ನಡೆಸಲು ಮಾತುಕತೆ ನಡೆಸಿದ್ದಾರೆ. ಆ ಸಮಯ ಸಾರ್ವಜನಿಕರು ಬಂದು ವೈಲುವನ್ನು ರಕ್ಷಿಸಿದ್ದಾರೆ. ಈ ಬಗ್ಗೆ ಬಂದರು ಠಾಣೆಯಲ್ಲಿ ಅಪಹರಣ ಹಾಗೂ ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.