ವಿಟ್ಲ: ಪಟ್ಟಣ ಪಂಚಾಯತ್ ಚುನಾವಣೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಂಗೈಯಲ್ಲಿ ಚಂದ್ರ ಲೋಕವನ್ನು ತೋರಿಸುವ ಪಕ್ಷವನ್ನು ಮರೆತು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಪಟ್ಟಣ ಪಂಚಾಯತ್ ಅಧಿಕಾರದ ಗದ್ದುಗೆ ಏರಿ ಪ್ರಣಾಳಿಕೆಯಲ್ಲಿರುವ ಅಂಶವನ್ನು ನೆರವೇರಿಸಿ ಕೊಡಲಿದ್ದಾರೆ. ನಮ್ಮಿಂದ ಜನ ನೆಮ್ಮದಿಯ ಆಡಳಿತವನ್ನು ಬಯಸುತ್ತಿದ್ದಾರೆ ಎನ್ನುವುದು ಪ್ರಜೆಗಳ ಪ್ರಣಾಳಿಕೆಯಲ್ಲಿ ನೋಡಿದಾಗ ತಿಳಿದುಬರುತ್ತದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ರವರು ಹೇಳಿದರು.
ವಿಟ್ಲದಲ್ಲಿರುವ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪ್ರಜೆಗಳ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಇದೊಂದು ವಿನೂತನ ಕಾರ್ಯಕ್ರಮವಾಗಿದೆ. ಕೇವಲ ನಾಲ್ಕು ಗೋಡೆಯ ಒಳಗೆ ಕುಳಿತುಕೊಂಡು ಮಾಡಿದ ಪ್ರಣಾಳಿಕೆ ಇದಲ್ಲ. ಇದು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜೆಗಳೇ ತಯಾರಿಸಿದ ಪ್ರಣಾಳಿಕೆಯಾಗಿದೆ ಎಂದರು.
ಸುಳ್ಳು ಆಶ್ವಾಸನೆ ನೀಡುವ ಪ್ರಣಾಳಿಕೆ ಇದಲ್ಲ. ಜನರು ತಿಳಿಸಿದ ಬೇಡಿಕೆಗಳಲ್ಲಿ ಆಯ್ದ ಕೆಲವನ್ನು ಇದರಲ್ಲಿ ಅಳವಡಿಸಲಾಗಿದೆ. ನಮ್ಮ ಸದಸ್ಯರು ಆಯ್ಕೆ ಯಾದ ಬಳಿಕ ಅವೆಲ್ಲವನ್ನು ಅನುಷ್ಠಾನಗೊಳಿಸುವಲ್ಲಿ ನಾವುಗಳು ಕೂಡ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.
ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿಯವರು ಮಾತನಾಡಿ, ಪ್ರಜೆಗಳು ಹಲವಾರು ಬೇಡಿಕೆಗಳನ್ನು ಇಟ್ಟಿದ್ದಾರೆ. ಅವೆಲ್ಲವನ್ನು ನೆನಪಲ್ಲಿಟ್ಟು ಕೆಲವನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಕೆಲವರು ಬೇಡಿಕೆಗಳೊಂದಿಗೆ ಸಲಹೆಗಳನ್ನು ನೀಡಿದ್ದಾರೆ. ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವೆಲ್ಲವನ್ನು ಸರಿಪಡಿಸಿಕೊಂಡು ಮುಂದುವರೆಯಲಿದ್ದೇವೆ ಎಂದರು.
ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿರವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ವಿ., ಚುನಾವಣಾ ಉಸ್ತುವಾರಿಗಳಾದ ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು ಎಂ.ಎಸ್ ಮಹಮ್ಮದ್, ಚಂದ್ರ ಹಾಸ್ ಕರ್ಕೇರ, ಕೆ.ಪಿಸಿಸಿ ಸಂಯೋಜಕ ಚಿತ್ತರಂಜನ್ ಶೆಟ್ಟಿ, ಮುಖಂಡರಾದ ಉಮಾನಾಥ ಶೆಟ್ಟಿ, ಜೋಕಿಂ ಡಿಸೋಜ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಣಾಳಿಕೆಯ ಅಂಶಗಳು:
- ಬಂಟ್ವಾಳ ತಾಲೂಕಿನ ಬರಿಮಾರಿನಿಂದ ವಿಟ್ಲಕ್ಕೆ ಸಮರ್ಪಕ ಸಮಗ್ರ ಕುಡಿಯುವ ನೀರು ಸರಬರಾಜು.
- ವಿಟ್ಲ ಪಟ್ಟಣ ವ್ಯಾಪ್ತಿಯಲ್ಲಿ ADB ಸಹಯೋದೊಂದಿಗೆ KUDCEMP ಮೂಲಕ ಒಳಚರಂಡಿ ಯೋಜನೆ ಅನುಷ್ಟಾನ. ಪಟ್ಟಣ ಪಂಚಾಯತ್ ಸ್ವಾಧೀನದಲ್ಲಿರುವ ಭೂಮಿಯನ್ನು ವಸತಿ ರಹಿತರಿಗೆ ನಿವೇಶ ನೀಡುವುದು
- ವ್ಯವಸ್ಥಿತವಾಗಿ ಸಂತೆ ಮಾರುಕಟ್ಟೆ ಮತ್ತು ರೈತರಿಗೆ ಬಹುಪಯೋಗಿ ಕೃಷಿ ಮಾರುಕಟ್ಟೆ ನಿರ್ಮಾಣ
- ಸುಧಾರಿತ ರೀತಿಯಲ್ಲಿ ವಾಹನ ಪಾರ್ಕಿಂಗ್ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ನಿತ್ಯ ಮಾರುಕಟ್ಟೆ ವ್ಯವಸ್ಥೆ
- ವಿಟ್ಲಕ್ಕೆ ಪ್ರತ್ಯೇಕ ಪ್ರಾಧಿಕಾರ ವ್ಯವಸ್ಥೆಗೆ ಒತ್ತು ನೀಡುವುದು. ಮತ್ತು ವಿಟ್ಲ ಸಮುದಾಯ ಆಸ್ಪತ್ರೆಯನ್ನು ಮೂಲಭೂತ ಸೌಲಭ್ಯದೊಂದಿಗೆ ಮೇಲ್ದಾರ್ಜೆಗೆ ಏರಿಸುವುದು
- ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ನಿವಾರಿಸುವ ಬಗ್ಗೆ ಪ್ರಮಾಣಿಕ ವ್ಯವಸ್ಥೆ ಕಲ್ಪಿಸುವುದು
- ವಿಟ್ಲ ತಾಲೂಕು ರಚನೆಗೆ ಒತ್ತು ಹಾಗೂ 400 ಕೆ.ವಿ ವಿರುದ್ಧ ಹೋರಾಟ
- ಕೊರೊನಾ ವಿರುದ್ಧ ಹೋರಾಟ ಸಂದರ್ಭ ಏರಿಸಿದ ತೆರಿಗೆಗಳನ್ನು ಮರು ಪರಿಶೀಲನೆ
- ನಮ್ಮ ಯೋಜನೆ ಮತ್ತು ಯೋಚನೆ ಪ್ರಕಾರ ಹೊರ ವರ್ತುಲ ರಸ್ತೆ ಮತ್ತು ಪೇಟೆಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಸುಗಮವಾಗಿ ಚಲಿಸಲು ಮೇಲ್ಸೆತುವೆ ನಿರ್ಮಾಣ.