ಪುತ್ತೂರು: ನಾನು ರಾಜ್ಯ ಸಭೆಗೆ ಅಪೇಕ್ಷಿತ. ಆದರೆ ಅದಕ್ಕಾಗಿ ಲಾಭಿ ನಡೆಸುವುದಿಲ್ಲ.ಕೇಂದ್ರದವರಿಗೆ ಕೊಡಬೇಕೆಂದು ಅನಿಸಿದರೆ ಕೊಡಲಿ ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರೂ ಆಗಿರುವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಎವಿಜಿ ಆಂಗ್ಲ ಮಾಧ್ಯಮ ಶಾಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದರು. ಚುನಾವಣಾ ರಾಜಕಾರಣದಲ್ಲಿ ನಾನು ಸ್ಪರ್ಧಿಯಲ್ಲ.ಇತರ ಯಾವುದೇ ಜವಾಬ್ದಾರಿ ಕೊಟ್ಟರೆ, ಅದು ರಾಜ್ಯಸಭೆ ಆಗಿರಬಹುದು, ರಾಜ್ಯಪಾಲ ಆಗಿರಬಹುದು ವಹಿಸಿಕೊಳ್ಳುವೆ.
ನಾನೇನು ಸನ್ಯಾಸಿಯಲ್ಲ.ನಾನೂ ಒಂದು ರಾಜಕಾರಣದಲ್ಲಿ ಬೆಳೆದು ಬಂದವ. ಆದರೆ ನಾನೊಬ್ಬ ಸಂತೃಪ್ತ ರಾಜಕಾರಣಿ ಎಂದರು.
ಮೊನ್ನೆ ಕೋರ್ ಕಮಿಟಿ ಮೀಟಿಂಗ್ ನಲ್ಲಿ ಎಲ್ಲಾ 13 ಮಂದಿ ನನ್ನ ಹೆಸರನ್ನೇ ಉಲ್ಲೇಖಿಸಿದ್ದಾರೆ. ಏನಿದ್ದರೂ ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ನಾನು ಬದ್ದ ಎಂದು ಡಿವಿಎಸ್ ಹೇಳಿದರು.
ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತು ಕೇಂದ್ರದ ತೀರ್ಮಾನ ಅಂತಿಮ ಎಂದು ಡಿವಿಎಸ್ ಇದೇ ವೇಳೆ ಹೇಳಿದರು.
ಪುತ್ತೂರಿನ ರಾಜಕಾರಣದ ಶುದ್ದೀಕರಣ ನನ್ನ ಲೆವೆಲಿನದ್ದು ಅಲ್ಲ: ರಾಜಕಾರಣದಲ್ಲಿ ಶುದ್ದೀಕರಣ ನಡೆಯುತ್ತಾ ಇದೆ.ಯತ್ನಾಳ್ ಅವರನ್ನು ಗಂಗಾಸ್ನಾನಕ್ಕೆ ಕಳುಹಿಸಿಕೊಟ್ಟಿದ್ದೇವೆ. ಸೋಮಶೇಖರ್, ಶಿವರಾಮ ಹೆಬ್ಬಾರ್ ಅವರನ್ನೂ ಕಳಿಸಿದ್ದೇವೆ. ಹೀಗೆ ಶುದ್ದೀಕರಣ ನಡೆಯುತ್ತಾ ಇರುತ್ತದೆ. ಆದರೆ, ಶುದ್ದೀಕರಣ ವಿಚಾರದಲ್ಲಿ ಪುತ್ತೂರು ನನ್ನ ಲೆವಲಿನದ್ದು ಅಲ್ಲ.ನಾನು ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ಅಧ್ಯಕ್ಷನಾಗಿ, ಕೇಂದ್ರದ ಸಚಿವನಾಗಿ ಎಲ್ಲವನ್ನೂ ಮಾಡಿದವನು.ಇನ್ನು ಕೆಳಗಿನದಕ್ಕೆ ಬರುವುದಿಲ್ಲ.ಪುತ್ತೂರು ನನ್ನ ಲೆವೆಲಿನದ್ದು ಅಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಡಿವಿಎಸ್ ಪ್ರತಿಕ್ರಿಯೆ ನೀಡಿದರು.



























