ಬಂಟ್ವಾಳ, ಜೂನ್ 5: ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂ.ಡಿ.ಎಂ.ಎ ಮಾದಕ ವಸ್ತು ಸಾಗಾಟ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ₹7.64 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜೂನ್ 4ರಂದು ಸಂಜೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿಯವರು ಠಾಣಾ ಸಿಬ್ಬಂದಿಗಳೊಂದಿಗೆ ಮೆಲ್ಕಾರ್ ಫ್ಲೈಓವರ್ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅನುಮಾನಾಸ್ಪದ ಕಾರೊಂದನ್ನು ತಡೆದು ಪರಿಶೀಲಿಸಿದರು. ಕಾರಿನಲ್ಲಿ ಚಾಲಕ ಸೇರಿದಂತೆ ಮೂವರು ಪ್ರಯಾಣಿಕರು ಇದ್ದರು.
ತಪಾಸಣೆಯ ವೇಳೆ ಮಾದಕ ವಸ್ತು ಸೇವನೆಗೆ ಬಳಸುವ ಸಾಧನ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ ಆರೋಪಿಗಳು ಬಂಟ್ವಾಳ ಪುದು ನಿವಾಸಿ ಎ. ಜುಬೈರ್ (39), ಸಜಿಪ ಮುನ್ನೂರು ನಿವಾಸಿ ಮೊಹಮ್ಮದ್ ಸವಾದ್ (36) ಹಾಗೂ ಬಿ. ಮೂಡ ನಿವಾಸಿ ಬಿ.ಎಂ. ರಶೀದ್ ಅಲಿಯಾಸ್ ಮಾರಿಮುತ್ತು ಎಂದು ಗುರುತಿಸಲಾಯಿತು.
ಆರೋಪಿಗಳು ಹೆಚ್ಚಿನ ಲಾಭಕ್ಕಾಗಿ ಎಂ.ಡಿ.ಎಂ.ಎ ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ನಡೆಸಿದ ತಪಾಸಣೆಯಲ್ಲಿ ಆರೋಪಿಗಳ ಬಳಿ ಹಾಗೂ ಕಾರಿನಲ್ಲಿದ್ದ ಒಟ್ಟು 76 ಗ್ರಾಂ 40 ಮಿಲಿಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತು ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ₹7,64,000 ಆಗಿದೆ.
ಇದಲ್ಲದೆ, ಮಾದಕ ವಸ್ತು ಸೇವನೆಗೆ ಬಳಸುವ ಸಾಧನ, ಆರೋಪಿಗಳ ಬಳಿಯಿದ್ದ ಮೂರು ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ KA-19 MR-1997 ನೋಂದಣಿ ಸಂಖ್ಯೆಯ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



























