ಮಂಡ್ಯ: ರಾಜಕೀಯದಲ್ಲಿ ಸದ್ಯ ಸೈಲೆಂಟ್ ಆಗಿದ್ದ ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡಲು ತೆರೆಮರೆಯಲ್ಲಿ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಮುಂಬರುವ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಗೆ ಟಿಕೆಟ್ ಸಿಗಲೇಬೇಕು ಎಂದು ಬೆಂಬಲಿಗರ ಮೂಲಕ ಬಿಜೆಪಿ ವರಿಷ್ಠರ ಮೇಲೆ ತೀವ್ರ ಒತ್ತಡ ಹೇರಲು ಮುಂದಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಒಂದೆರಡು ಸಣ್ಣ-ಪುಟ್ಟ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ, ಸುಮಲತಾ ಅವರು ಯಾವುದೇ ಪ್ರಮುಖ ರಾಜಕೀಯ ಅಥವಾ ಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಈಗ ರಾಜ್ಯಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅವರ ರಾಜಕೀಯ ಅಸ್ತಿತ್ವದ ಹೋರಾಟ ಮತ್ತೆ ಮುಂಚೂಣಿಗೆ ಬಂದಿದೆ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಸೂಚನೆ ಹಾಗೂ ವರಿಷ್ಠರ ಮನವಿ ಮೇರೆಗೆ ಸುಮಲತಾ ಅವರು ಮಂಡ್ಯ ಕ್ಷೇತ್ರವನ್ನು ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಗಾಗಿ ಬಿಟ್ಟುಕೊಟ್ಟಿದ್ದರು. ಆ ಸಮಯದಲ್ಲಿ ಬಿಜೆಪಿ ನಾಯಕರು ಸುಮಲತಾ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಗೌರವ ಹಾಗೂ ಉನ್ನತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.
ಆದರೆ ಕ್ಷೇತ್ರ ತ್ಯಾಗ ಮಾಡಿದ ಬಳಿಕ ಬಿಜೆಪಿ (BJP) ಪಕ್ಷವು ಸುಮಲತಾ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎನ್ನುವುದು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ತಮಗೆ ನೀಡಿದ ಭರವಸೆಯನ್ನು ಬಿಜೆಪಿ ಈಡೇರಿಸಿಲ್ಲ ಎಂಬ ಅಸಮಾಧಾನ ಅವರ ವಲಯದಲ್ಲಿದೆ.
ತಮ್ಮ ನಾಯಕಿಗೆ ನ್ಯಾಯ ಸಿಗಬೇಕು ಎಂದು ಪಟ್ಟು ಹಿಡಿದಿರುವ ಸುಮಲತಾ ಬೆಂಬಲಿಗರು, ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಭೇಟಿಯಾಗಿ ಅಧಿಕೃತ ಮನವಿ ಸಲ್ಲಿಸಿದ್ದಾರೆ.
ಇಷ್ಟು ದಿನ ರಾಜಕೀಯದಿಂದ ದೂರ ಉಳಿದಿದ್ದ ರೆಬಲ್ ಲೇಡಿ, ಈಗ ಬೆಂಬಲಿಗರ ಮೂಲಕ ಪದೇ ಪದೇ ಒತ್ತಾಯ ಮಾಡಿಸುವ ತಂತ್ರದೊಂದಿಗೆ ಮರಳಿ ರಾಜಕೀಯ ಅಸ್ತಿತ್ವ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಬಿಜೆಪಿ ವರಿಷ್ಠರು ಸುಮಲತಾ ಅವರ ಈ ರಾಜ್ಯಸಭೆ ಬೇಡಿಕೆಗೆ ಮಣಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.


























