ಪುತ್ತೂರು, ಜೂ. 6: ಪಕ್ಷದ ಶುದ್ಧೀಕರಣ ವಿಚಾರದಲ್ಲಿ ತಾನು ನೀಡಿದ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲ ಮಾಧ್ಯಮಗಳಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚೆಗೆ ಪುತ್ತೂರಿನಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಪಕ್ಷದ ಶುದ್ಧೀಕರಣ ಕುರಿತ ವಿಷಯ ಪ್ರಸ್ತಾಪವಾಗಿತ್ತು. ಆ ವೇಳೆ “ಅದು ನನ್ನ ಮಟ್ಟದಲ್ಲಿ ನಿರ್ಧಾರವಾಗುವ ವಿಷಯವಲ್ಲ” ಎಂದು ಹೇಳಿದ್ದೇನೆ. ಅದರ ಅರ್ಥ, ಈ ವಿಷಯದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಪಕ್ಷದ ಹಿರಿಯ ನಾಯಕರಿಗೆ ಸೇರಿದ್ದು, ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂಬುದಾಗಿತ್ತು ಎಂದು ತಿಳಿಸಿದ್ದಾರೆ. ಆದರೆ ತಮ್ಮ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿ, ಪುತ್ತೂರು ಹಾಗೂ ಪಕ್ಷದ ಬಗ್ಗೆ ತಾವು ನಿರ್ಲಕ್ಷ್ಯ ಧೋರಣೆ ಹೊಂದಿರುವಂತೆ ಬಿಂಬಿಸಲಾಗುತ್ತಿದೆ. ಇದು ನೋವು ತಂದಿದೆ ಎಂದು ಅವರು ಹೇಳಿದ್ದಾರೆ.
ಪುತ್ತೂರು ಮತ್ತು ಪಕ್ಷದ ಬಗ್ಗೆ ತಮಗೆ ಅಪಾರ ಗೌರವವಿದ್ದು, ರಾಜಕೀಯ ಜೀವನದಲ್ಲಿ ದೊರೆತ ಅವಕಾಶಗಳು ಹಾಗೂ ಬೆಂಬಲವನ್ನು ಸದಾ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಪಕ್ಷದ ನಾಯಕತ್ವ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ತಾನು ಬದ್ಧನಾಗಿದ್ದು, ಪಕ್ಷದ ಹಿತಾಸಕ್ತಿಯೇ ತನ್ನ ಆದ್ಯತೆ ಎಂದು ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸದೆ, ಅದರ ನಿಜವಾದ ಆಶಯವನ್ನು ಪರಿಗಣಿಸುವಂತೆ ಅವರು ಮನವಿ ಮಾಡಿದ್ದಾರೆ.



























