ಮಂಗಳೂರು: ನೈಟ್ ಕರ್ಫ್ಯೂ ವಿಚಾರದಲ್ಲಿ ರಾಜ್ಯ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುವುದು. ಕಂಬಳ, ಯಕ್ಷಗಾನ ಸೇರಿದಂತೆ ರಾತ್ರಿ ನಡೆಯುವಂತಹ ಕಾರ್ಯಕ್ರಮಗಳನ್ನು 10 ಗಂಟೆಯೊಳಗೆ ಮುಗಿಸಬೇಕು, ಇದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದಾರೆ.
ನೈಟ್ ಕರ್ಫ್ಯೂ ಅವಧಿ ಆರಂಭಕ್ಕೂ ಮೊದಲೇ ಎಲ್ಲ ಕಾರ್ಯಕ್ರಮ ಮುಗಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು. ಓಮಿಕ್ರಾನ್ ಹೆಚ್ಚುತ್ತಿರುವ ಕಾರಣ ಸರ್ಕಾರವು ಕಟ್ಟೆಚ್ಚರದ ನಿಯಾಮಾವಳಿಗಳನ್ನು ಜಾರಿಗೆ ತಂದಿದ್ದು, ಯಾವುದೇ ಕಾರಣಕ್ಕೆ ನೈಟ್ ಕರ್ಫ್ಯೂ ಅವಧಿಯಲ್ಲಿ ನಿಯಮಗಳನ್ನು ಸಡಿಲಗೊಳಿಸಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ರಾತ್ರಿ ವೇಳೆ ನಡೆಯುವಂತಹ ಯಕ್ಷಗಾನ, ಕಂಬಳಗಳನ್ನು ಬೇಗನೆ ಆರಂಭಿಸಿ, ನೈಟ್ ಕರ್ಫ್ಯೂ ಅವಧಿ ಆರಂಭವಾಗುವುದರೊಳಗೆ ಮುಗಿಸಬೇಕು.
ನೈಟ್ ಕರ್ಫ್ಯೂ ನಿಯಮಗಳು ಇಡೀ ರಾಜ್ಯಕ್ಕೆ ಅನ್ವಯ ಆಗುವುದರಿಂದ, ನಿಯಮ ಸಡಿಲಗೊಳಿಸುವ ನಿರ್ಧಾರವೂ ಸರ್ಕಾರದ ಮಟ್ಟದಲ್ಲಿಯೇ ಆಗಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.