ಮಂಗಳೂರು:ಕಳೆದ ಕೆಲ ಸಮಯಗಳಿಂದ ಮಂಗಳೂರು ನಗರದ ಹಲವಾರು ಕಡೆಯ ಹಿಂದೂಗಳ ದೈವ, ದೇವಸ್ಥಾನದ ಕಾಣಿಕೆ ಹುಂಡಿಗೆ ಅವಹೇಳನಕಾರಿಯಾದ ಬರಹದ ಪತ್ರ, ಜೊತೆಗೆ ಬಳಸಿದ ಕಾಂಡೋಮ್ ಹಾಕಿ ಅಪವಿತ್ರಗೊಳಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿ ಟಿವಿ ಫುಟೆಜ್ ಆಧಾರದಲ್ಲಿ ಆರೋಪಿಯೊಬ್ಬನನ್ನು ವಿಚಾರಣೆಗೊಳಪಡಿಸಿದಾಗ ಎಲ್ಲಾ ವಿಚಾರಗಳು ಬಯಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಗುಜಿರಿ ವ್ಯಾಪಾರಿ ದೇವದಾಸ್ ದೇಸಾಯಿ(62) ಎಂದು ಗುರುತಿಸಲಾಗಿದೆ.
ಮೂಲತಃ ಹುಬ್ಬಳ್ಳಿಯ ಉಣ್ಣಲ್ ನಿವಾಸಿಯಾದ ಈತ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದ. ಮದುವೆಯಾಗಿ ಒಂದು ಹೆಣ್ಣು ಮಗು ಹಾಗೂ ಸಂಸಾರ ಇದ್ದ ಈತನನ್ನು ಮದುವೆಯಾಗಿ ಮೂರು ವರ್ಷದಲ್ಲಿ ಹೆಂಡತಿ ಬಿಟ್ಟು ಹೋಗಿದ್ದು, ಆ ಬಳಿಕ ಏಕಾಂಗಿಯಾಯಿಯೇ ನೆಲೆ ಕಂಡುಕೊಂಡಿದ್ದ ಎಂದು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ.
ಕೃತ್ಯದ ಬಗ್ಗೆ ಪಶ್ಚಾತ್ತಾಪವಿಲ್ಲ ಎಂದ ಆರೋಪಿ:
ಬೈಬಲ್ ನಲ್ಲಿ ಜಗತ್ತಿನ ಅಂತ್ಯದ ಬಗ್ಗೆ ವಿವರಿಸಿದೆ. ದೇವರು ದುರಾತ್ಮಗಳನ್ನು ಹೊರ ತಳ್ಳಿದ್ದಾನೆ. ಅದನ್ನು ಅನಾದಿ ಕಾಲದಿಂದ ಭೂಮಿಯಲ್ಲಿ ಆರಾಧಿಸಲಾಗುತ್ತಿದೆ. ಜಗತ್ತಿನ ಅಂತ್ಯದ ಸಮಯಕ್ಕೆ ಮುಕ್ತಿ ಹೊಂದಬೇಕಾದರೆ ಏಸುನನ್ನು ಆರಾಧಿಸಬೇಕು. ಹಾಗಾಗಿ ಅಶುದ್ಧಿಯ ತಾಣಗಳಿಗೆ ಅಶುದ್ಧಿಯೇ ಕಾಣಿಕೆಯಾಗಿದೆ. ಆದ್ದರಿಂದ ಅಲ್ಲಲ್ಲಿ ಸಿಕ್ಕ ಬಳಸಿದ ಕಾಂಡೋಮ್ ಹಾಕುತ್ತಿದ್ದೆ ಎಂದು ಆರೋಪಿ ತನ್ನ ಕೃತ್ಯದ ಬಗ್ಗೆ ವಿವರಿಸಿದ್ದಾನೆ.
ನಾನು ಮಾಡಿರುವ ಕೃತ್ಯದ ಬಗ್ಗೆ ಪಶ್ಚಾತ್ತಾಪವಿಲ್ಲ. ಹಿಂದೆ ಬರಹದ ಮೂಲಕ ಧರ್ಮ ಪ್ರಚಾರ ಮಾಡುತ್ತಿದ್ದೆ. ಈಗ ಕಾಂಡೋಮ್ ಮೂಲಕ ಮೂರ್ತಿಗಳನ್ನು ಅವಮಾನಿಸುತ್ತಿದ್ದೇನೆ. ದೇವರು ದುರಾತ್ಮಗಳನ್ನು ಅವಮಾನಿಸಲೆಂದೇ ಕಾಂಡೋಮ್ ಹಾಕಿದ್ದೇನೆ. ಬೈಬಲ್ ನಲ್ಲಿ ಏಸು ಕ್ರಿಸ್ತ ಈ ಕುರಿತು ವಿವರಿಸಿದ್ದಾನೆ ಎಂದು ಆರೋಪಿ ದೇವದಾಸ ದೇಸಾಯಿ ಸ್ಫೋಟಕ ಹೇಳಿಕೆ ನೀಡಿದ್ದಾನೆ.



























