ಪುತ್ತೂರು: ದೇಶದಲ್ಲಿ 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಏನು ಮಾಡಿದೆ ಎಂದು ಕಾಂಗ್ರೆಸ್‌ನ ಋಣದಲ್ಲಿ ಬದುಕಿ ಉಳಿದವರು ಕೇಳುತ್ತಿದ್ದಾರೆ. ಕಾಂಗ್ರೆಸ್ ಏನು ಮಾಡಿದೆ ಎಂಬುದನ್ನು ಜನತೆಗೆ ತಿಳಿ ಹೇಳಬೇಕಾಗಿಲ್ಲ, ಬ್ರಿಟಿಷರು ದೇಶಬಿಟ್ಟು ತೊಲಗಿದಾಗ ದೇಶದಲ್ಲಿ ಏನೂ ಇರಲಿಲ್ಲ ಎಲ್ಲವನ್ನೂ ಮಾಡಿದ್ದೇ ಕಾಂಗ್ರೆಸ್ ಪಕ್ಷವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಮೂರೇ ವರ್ಷದಲ್ಲಿ ಬಡವರನ್ನು ಬೀದಿಗೆ ತಳ್ಳಿದ್ದು, 70 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಬಡವರನ್ನು ಮೇಲಕ್ಕೆತ್ತಿದೆ ವಿನಾ ಬೀದಿಗೆ ತಳ್ಳಲಿಲ್ಲ ಎಂದು ಮಾಜಿ ಶಾಸಕಿ ಶಂಕುತಳಾ ಶೆಟ್ಟಿ ಹೇಳಿದರು.
ಅವರು ಜ.5 ರಂದು ನಿಡ್ಪಳ್ಳಿ ಗ್ರಾಪಂ ಮುಂಭಾಗದಲ್ಲಿ ಬಡವರಿಗೆ ಮನೆ ನೀಡದ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ರಾಜ್ಯವ್ಯಾಪಿಯಾಗಿ ಸರಕಾರಗಳ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ನಿಡ್ಪಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಮನೆಗಳು ಮಂಜೂರಾಗುತ್ತಿಲ್ಲ, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಮನೆ ಬಡವರಿಗೆ ನೀಡಿಲ್ಲ. ಯಡಿಯೂರಪ್ಪರೂ ನೀಡಿಲ್ಲ, ಬಸವರಾಜ ಬೊಮ್ಮಾಯಿಯ ಸರಕಾರವೂ ನೀಡಿಲ್ಲ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಪ್ರತೀ ಗ್ರಾಪಂಗೆ ತಲಾ 30 ಮನೆಯಂತೆ ವರ್ಷಂಪ್ರತಿ ನೀಡುತ್ತಿತ್ತು. ನಾನು ಶಾಸಕಳಾಗಿದ್ದ ವೇಳೆ ನೂರಾರು ಮನೆಗಳು ಮಂಜೂರಾಗಿತ್ತು, ಒಂದು ಹಂತದಲ್ಲಿ ಸರಿಯಾದ ಫಲಾನುಭವಿಗಳ ಕೊರತೆಯಿಂದ ಮನೆ ವಾಪಸ್ ಹೋಗುವಂತಾಗಿತ್ತು. ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಮನೆ ಸರಕಾರ ನೀಡಿಲ್ಲ. ಅರ್ಜಿ ಹಾಕಿದವರು ಕಾಯುವ ಗತಿಗೇಡು ನಿರ್ಮಾಣವಾಗಿದ್ದು, ಬಿಜೆಪಿ ಸರಕಾರಕ್ಕೆ ಬಡವರ ಪರ ಕಾಳಜಿಯಿಲ್ಲ ಎಂಬುದು ಇದರಲ್ಲಿ ಅರ್ಥವಾಗುತ್ತದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಸಾವಿರಾರು ಅರ್ಜಿಗಳು ಗ್ರಾಪಂನಲ್ಲಿ ಕೊಳೆಯುತ್ತಿದೆ ಮಾತನಾಡಿ ಸರಕಾರದ ಗಮನಕ್ಕೆ ತರುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಶಾಸಕರು ಮನಸ್ಸು ಮಾಡಿದರೆ ಲಕ್ಷಾಂತರ ಮನೆಗಳನ್ನು ತರಬಹುದಾಗಿತ್ತು ಅದನ್ನು ಅವರು ಮಾಡುವುದೇ ಇಲ್ಲ ಎಂದು ಆರೋಪಿಸಿದರು.
ಬ್ರಿಟಿಷರು ದೇಶ ಬಿಟ್ಟಾಗ ದೇಶದಲ್ಲಿ ಬಡವರಿಗೆ ಮನೆ ಇರಲಿಲ್ಲ. ಅವರಿಗೆ ಮನೆಯನ್ನು ನಿರ್ಮಾಣ ಮಾಡಿದ್ದು, ದೇಶವನ್ನಾಳಿದ ಕಾಂಗ್ರೆಸ್ ಸರಕಾರ. ಭೂಮಸೂದೆ ಕಾನೂನು ಜಾರಿಗೆ ತಂದು ಭೂಮಿ ಇಲ್ಲದವರಿಗೆ ಭೂಮಿ ಕೊಟ್ಟಿದ್ದಾರೆ. ಅಕ್ರಮ ಸಕ್ರಮ ಕಾನೂನು ಜಾರಿಗೆ ತಂದು ಕೋಟ್ಯಾಂತರ ಮಂದಿ ಭೂಮಿಯನ್ನು ಪಡೆದುಕೊಂಡಿದ್ದಾರೆ. ಈ ಎಲ್ಲಾ ಕಾನೂನು ತಂದ ಕಾಂಗ್ರೆಸ್ ಪಕ್ಷದ ಬಗ್ಗೆ ಏನು ಮಾಡಿದೆ ಎಂದು ಶಾಳು ಹಾಕಿಕೊಂಡು ಬೊಬ್ಬೆ ಹಾಕುತ್ತಿದ್ದಾರೆ. ಭೂ ಮಸೂದೆ ಕಾನೂನಲ್ಲಿ ಭೂಮಿ ಕಳೆದುಕೊಂಡವ ಕಾಂಗ್ರೆಸ್ಸಲ್ಲೇ ಇದ್ದಾರೆ, ಭೂಮಿ ಪಡೆದುಕೊಂಡವರು ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ.ಅನ್ನಭಾಗ್ಯ ಜಾರಿಗೆ ತಂದ ಸಿದ್ದರಾಮಯ್ಯ ಸರಕಾರದ ಬಗ್ಗೆ ಕೆಟ್ಟದಾಗಿ ಮತನಾಡುತ್ತಾರೆ ಅವರೇ ಜಾರಿಗೆ ತಂದ ಈ ಯೋಜನೆಯಲ್ಲಿ ಅಕ್ಕಿ ಪಡೆದವರು ಇಂದು ಬಿಜೆಪಿ ಸರಕಾರ ಅಕ್ಕಿ ಕಡಿಮೆ ನೀಡುವುದಾಗಿ ಹೇಳುತ್ತಿರುವಾಗ ಅದರ ವಿರುದ್ದ ಕಾಂಗ್ರೆಸ್ ಮಾತನಾಡಬೇಕು ಎಂದು ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಒಂದು ತಿಂಗಳ ಮಟ್ಟಿಗೆ ಅಕ್ಕಿ ನಿಲ್ಲಿಸಿದರೆ ಅದರ ನೋವು ಎಲ್ಲರಿಗೂ ಗೊತ್ತಾಗಲಿದೆ. ಸಿದ್ದರಾಮಯ್ಯ ಅವರು ಯಾಕೆ ಅನ್ನಭಾಗ್ಯ ತಂದಿದ್ದಾರೆ ಎಂಬುದು ಆಗ ಗೊತ್ತಾಗಬಹುದು ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯ ಸರ್ಕಾರ ಮನೆ ಮಂಜೂರಾದ ಕುಟುಂಬಗಳಿಗೆ ತಲಾ ಎರಡು ಲಕ್ಷದಂತೆ ಹಣ ತಕ್ಷಣ ಬಿಡುಗಡೆ ಮಾಡಿ ಬಡವರ ಕಣ್ಣೀರೊರೆಸುವ ಕೆಲಸವನ್ನು ಮಾಡಬೇಕು ಎಂದು ಆಗ್ರಹಿಸಿದರು. ಈ ಪ್ರತಿಭಟನೆ ರಾಜ್ಯ ವ್ಯಾಪ್ತಿಯಗಿ ನಡೆಯಲಿದ್ದು, ನಿಡ್ಪಳ್ಳಿಯಲ್ಲಿ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಬಿಜೆಪಿಗೆ ಬಡವರ ಪರ ಕಾಳಜಿಯಿಲ್ಲ:
ಚುನಾವಣೆಯ ಸಂದರ್ಭದಲ್ಲಿ ಭಾವನಾತ್ಮಕ ವಿಷಯದಲ್ಲಿ ಜನರನ್ನು ಮರಳು ಮಾಡಿ ಚುನಾವಣೆಯಲ್ಲಿ ಗೆಲ್ಲುವ ತಂತ್ರವನ್ನು ಅಳವಡಿಸಿಕೊಂಡಿರುವ ಬಿಜೆಪಿ ಸುಳ್ಳನ್ನೇ ಬಂಡವಾಳವನ್ನಾಗಿಸುತ್ತದೆ. ಸುಳ್ಳೇ ಬಿಜೆಪಿಗೆ ಅಸ್ತ್ರವಾಗಿದೆ. ಮೂರು ವರ್ಷದಿಂದ ರಾಜ್ಯದ ಬಡ ಜನತೆಗೆ ಒಂದೇ ಒಂದು ಮನೆಯನ್ನು ಕೊಟ್ಟಿಲ್ಲ. ಸಿದ್ದರಾಮಯ್ಯ ಸರಕಾರ ಕೊಟ್ಟು ಅರ್ಧ ಕಾಮಗಾರಿಗೆ ಅಂದಿನ ಸರಕಾರ ನೀಡಿದ ಮೊತ್ತವನ್ನು ಮರಳಿಸುವಂತೆ ಬಡವನಿಗೆ ಬಿಜೆಪಿ ಸರಕಾರ ನೊಟೀಸ್ ನೀಡಿ ವಸೂಲಿಗೆ ಮುಂದಾಗಿದೆ. ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡೆಯುತ್ತಿರುವ ಬಡವರು ಸರಕಾರಕ್ಕೆ ಎಲ್ಲಿಂದ ಹಣವನ್ನು ಮರುಪಾವತಿಸಲು ಸಾಧ್ಯ. ಬಡವರ ಮೇಲೆ ಕನಿಷ್ಠ ಕಾಳಜಿ ಇರುತ್ತಿದ್ದರೆ ಬಡವ ಕಟ್ಟಿದ ಮನೆಯನ್ನು ಪೂರ್ತಿ ಮಾಡಲು ಸರಕಾರ ಅನುದಾನವನ್ನು ನೀಡಬೇಕಿತ್ತು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹೇಳಿದರು.
ಸ್ವ ಲಾಭಕ್ಕೋಸ್ಕರ ಇಂದು ದೇಶದಲ್ಲಿ ಪ್ರತೀಯೊಂದು ಇಲಾಖೆಯನ್ನು, ಸರಕಾರಿ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಮೋದಿ ಸರಕಾರ ಮುಂದಾಗಿದೆ. ಇದು ಹೀಗೇ ಮುಂದುರೆದರೆ ಎಲ್ಲವೂ ಖಾಸಗೀಕರಣವಾಗಿ ಮುಂದೆ ಮೀಸಲಾತಿ ಇಲ್ಲದೆ ಬಡವರ್ಗಕ್ಕೆ ತೊಂದರೆಯಾಗುತ್ತದೆ. ಬಂಡವಾಳ ಶಾಹಿಗಳ ಅಭಿವೃದ್ದಿಗೆಂದೇ ಮೋದಿ ಸರಕಾರ ಖಾಸಗೀಕರಣವನ್ನು ಮಾಡುತ್ತಿದೆ. ಮಾತೆತ್ತಿದರೆ ಸುಳ್ಳೇ ಹೇಳುವ ಪ್ರಧಾನಿ ಮದುವೆಯೇ ಆಗಿಲ್ಲ ಎಂದಿದ್ದರು, ಬಳಿಕ ವಿಷಯ ಬಹಿರಂಗವಾಯಿತು. ಅಚ್ಚೇಧಿನ್ ಎಲ್ಲಿ ದೇಶದ ಭಧ್ರತೆ ವಿಚಾರ ಏನಾಯಿತು ಎಲ್ಲವನ್ನೂ ದೇಶದ ಜನ ಗಮನಿಸುತ್ತಿದ್ದಾರೆ. ಸುಳ್ಳು ಹೆಚ್ಚು ದಿನ ನಡೆಯಲ್ಲ ವಿದ್ಯಾವಂತ ಯುವಕರು ಮೋದಿಯ ಬಣ್ಣ ಬಯಲು ಮಾಡುವ ಕಾಲ ದೂರವಿಲ್ಲ. ಬಡವರಿಗೆ ಮನೆ ನೀಡದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ವಿರುದ್ದ ಜನಾಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಜನತಾ ಕಾಲನಿ ಇಂದಿರಾಗಾಂಧಿ ಯೋಜನೆ:
ಇಂದು ಪ್ರತೀ ಗ್ರಾಮದಲ್ಲೂ ಒಂದೋ ಎರಡೋ ಕಾಲನಿಗಳಿವೆ ಅದು ಮಾಜಿ ಪ್ರಧಾನಿ ಇಂದಿರಾಗಾಂಧಿ ಯೋಜನೆಯಾಗಿದೆ. ಮನೆ ಇಲ್ಲದೆ ಬೀದಿಯಲ್ಲಿದ್ದ ಅನೇಕ ಕುಟುಂಬಗಳನ್ನು ಒಂದೇ ಕಡೆ ಸೇರಿಸಿ ಅವರಿಗೊಂದು ಮನೆ ನಿರ್ಮಾಣ ಮಾಡಿದ್ದು, ಕಾಂಗ್ರೆಸ್ ಸರಕಾರವಾಗಿದೆ. ಅಕ್ರಮಸಕ್ರಮವೂ ಕಾಂಗ್ರೆಸ್ ಯೋಜನೆಯಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಬಡವರಿಗೆ ಕಾಂಗ್ರೆಸ್ ಕೊಟ್ಟ ಮನೆಯನ್ನು ವಾಪಸ್ ಪಡೆದುಕೊಂಡು ಬಡವನನ್ನು ಬೀದಿಗೆ ತಳ್ಳಿದೆ. ಅರ್ಧದಲ್ಲೇ ಬಾಕಿಯಾದ ಸಾವಿರಾರು ಮನೆಗಳ ಗತಿಯೇನು..? ಸರಕಾರಕ್ಕೆ ಬಡವ ಒಂದು ಮನೆಯಲ್ಲಿ ವಾಸ ಮಾಡುವುದು ಇಷ್ಟವಿಲ್ಲವೇ..? ಎಂದು ಪ್ರಶ್ನಿಸಿದ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದಾಲಿ ಬಡವರು ನೆಮ್ಮದಿಯಿಂದ ಇರಬೇಕಾದರೆ ದೇಶದಲ್ಲಿ , ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬೇಕು ಎಂಬುದು ಜನತೆಗೆ ಗೊತ್ತಾಗಿದೆ. ನಿತ್ಯ ವಸ್ತುಗಳ ಬೆಲೆ ಏರಿಕೆ, ಇಂಧನ ಬೆಲೆ , ಅಡುಗೆ ಅನಿಲದ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಪಂಚ ರಾಜ್ಯದಲ್ಲಿ ಚುನಾವಣೆ ನಡೆದಾಗ ಜನತೆ ಬಿಜೆಪಿಗೆ ಪೆಟ್ಟುಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಇಂಧನ ಬೆಲೆ ಹತ್ತು ರೂ ಕಡಿಮೆ ಮಾಡಿದ್ದಾರೆ. ಜನ ಇನ್ನೂ ಪೆಟ್ಟು ಕೊಡಲಿದ್ದಾರೆ ಎಂದ ಆಲಿ ರಿಲಾಯನ್ಸ್ ಮಾಲ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮೋದಿ ಸರಕಾರದಿಂದ ವೇತನ ಬರುತ್ತಿರುವುದು ಮೋದಿಯ ಬಂಡವಾಳ ಶಾಹಿ ಪ್ರೀತಿಗೆ ಉಧಾಹರಣೆಯಾಗಿದೆ. ಬಡವರಿಗೆ ಮನೆ ನೀಡಲು ಸರಕಾರ ಮುಂದಾಗದೇ ಇದ್ದಲ್ಲಿ ಗಲ್ಲಿಗಲ್ಲಿಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.
ಬಿಜೆಪಿ ವಿರುದ್ದ ಜನಾಂದೋಲನ :
ಬಡವನಿಗೆ ಒಂದೇ ಒಂದು ಮನೆಯನ್ನು ಬಿಜೆಪಿ ಸರಕಾರ ನೀಡಿಲ್ಲ. ಕಾಂಗ್ರೆಸ್ ಸರಕಾರವಿದ್ದಾಗ ಬಡವನಿಗೆ ಮನೆ ಕಟ್ಟಲು ಧೈರ್ಯ ಇತ್ತು , ಸರಕಾರವೂ ಮನೆ ನೀಡುತ್ತಿತ್ತು. ಬಡವರ ಉದ್ದಾರ ಮಾಡುವುದಾಗಿ ಭರವಸೆ ಕೊಟ್ಟ ಬಿಜೆಪಿಗರು ಗೆದ್ದು ಅಧಿಕಾರಕ್ಕೆ ಬಂದ ಬಳಿಕ ಬಡವರನ್ನು ಬೀದಿಗೆ ತಳ್ಳಿದ್ದಾರೆ. ಬಿಜೆಪಿ ಸರಕಾರದ ವಿರುದ್ದ ಪುತ್ತೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಪ್ರತಿಭಟನೆ ನಡೆಯಲಿದ್ದೇವೆ, ಅರ್ಜಿ ಹಾಕಿದ ಫಲಾನುಭವಿಗಳನ್ನು ಕೂರಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಲಿದ್ದು ಮುಂದೆ ಇದೊಂದು ಜನಾಂದೋಲನವಾಗಿ ರೂಪಿಸಲಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಅಮಲ ರಾಮಚಂದ್ರ ಹೇಳಿದರು.
ದೇಶದಲ್ಲಿ, ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬಂದರೆ ಜನಪರ ಆಡಳಿತ ನೀಡುತ್ತಾರೆ ಎಂಬುದು ಜನರಿಗೆ ಈಗ ಅರ್ಥವಾಗಿದೆ. ಕಾಂಗ್ರೆಸ್ ಸರಕಾರವಿದ್ದಾಗ ಮನೆ ಬಾಗಿಲಿಗೆ ಸರಕರದ ಸೇವೆಗಳು ಸಿಗುತ್ತಿತ್ತು, ಇಂದು ಅರ್ಜಿ ಹಾಕಿದರೂ ಮನೆ ಸಿಗುತ್ತಿಲ್ಲ, ಕೊಟ್ಟ ಮನೆಯನ್ನು ಮರಳಿ ಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಡ್ಪಳ್ಳಿಯಲ್ಲಿ ಪ್ರತಿಭಟನೆ ನಡೆಸುತ್ತಾರೆ ಎಂಬ ಸುದ್ದಿ ತಿಳಿದು ಬಿಜೆಪಿಗರು ಸೋಶಿಯಲ್ ಮೀಡಿಯಾದಲ್ಲಿ ಸರಕಾರದಿಂದ ಲಕ್ಷ ಲಕ್ಷ ಮನೆ ಮಂಜೂರಾಗಿದೆ ಎಂದು ಸುಳ್ಳು ಸಂದೇಶವನ್ನು ರವಾನೆ ಮಾಡಿದ್ದಾರೆ. ಸುಳ್ಳಿನಿಂದಲೇ ಬೆಳೆದ ಬಿಜೆಪಿಗೆ ಇಂಥಹದೊಂದು ಸುಳ್ಳು ಹೊಸತಲ್ಲ. ಜನ ಅರ್ಥ ಮಾಡಿಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಜನ ನೆಮ್ಮದಿಯಿಂದ ಬಾಳಿ ಬದುಕಬೇಕಾದರೆ, ಬಡವನ ಮನೆ ಕೆಲಸ ಪೂರ್ತಿಯಾಗಬೇಕಾದರೆ, ಅರ್ಹರಿಗೆ ಮನೆ ಸಿಗಬೇಕಾದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು.
ಪಟೇಲ್ ಪ್ರತಿಮೆಯನ್ನು ಮಾಡುವ ಬದಲು ಅದೇ 30000000 ಕೋಟಿಯಲ್ಲಿ ಬಡವರಿಗೆ ಪಟೇಲ್ ಹೆಸರಲ್ಲೇ ಮನೆ ಕೊಡಬಹುದಿತ್ತು, ಮೋದಿಯವರ ಕೋಟಿಯ ಕಾರಿನಲ್ಲಿ ಸಾವಿರಾರು ಮನೆ ಕಟ್ಟಬಹುದಿತ್ತು, ೮೦೦೦ ಕೋಟಿಯ ವಿಮಾನ ಖರೀದಿಸುವ ಬದಲು ೮ ಲಕ್ಷ ಮನೆ ನಿರ್ಮಾಣ ಮಾಡಿ ಬಡವರ ಬದುಕನ್ನು ಬೆಳಗಿಸಬಹುದಿತ್ತು, ಆದರೆ ದೇಶದ ಪ್ರಧಾನಿ ಶೋಕಿ ಜೀವನಕ್ಕಾಗಿ ದೇಶದ ಖಜಾನೆಯನ್ನು ಲೂಟಿ ಹೊಡೆಯುತ್ತಿದ್ದಾರೆ. ಬಡವರ ಪರ ಕಾಳಜಿಯಿಲ್ಲ. ಹೋರಾಟದಲ್ಲಿ ಮಡಿದ ರೈತರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಇಂಥಹವೊಬ್ಬ ಪ್ರಧಾನಿಯನ್ನು ಪಡೆದ ನಾವು ದೌಭಾರ್ಗ್ಯವಂತರು ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಇಂಜಿನಿಯರ್ ಆಲಿಕುಂಞ ಕೊರಿಂಗಿಲ ಹೇಳಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಪಂಚಾಯತ್ ರಾಜ್ ಘಟಕದ ಅಧ್ಯಕ್ಷ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಸ್ಕರೇನಸ್, ಮಹಿಳಾ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಸೀತಾಭಟ್, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬೂಬಕ್ಕರ್ ಕೊರಿಂಗಿಲ, ಪಾಣಾಜೆ ವಲಯ ಅಧ್ಯಕ್ಷ ಬಾಬು ರೈ ಕೋಟ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮನಮೋಹನ್, ಗ್ರಾಪಂ ಸದಸ್ಯ ಮೊಯ್ಯಿದ್ದೀನ್ , ನಗರಸಭಾ ಸದಸ್ಯ ರಾಬಿನ್ ತಾವ್ರೊ, ನಗರ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ರಶೀದ್ ಮುರ, ಜಿಲ್ಲಾ ಸೇವಾ ದಳದ ಸಿದ್ದಿಕ್ ಸುಲ್ತಾನ್, ಕಾರ್ಮಿಕ ಬ್ಲಾಕ್ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ, ಗ್ರಾಪಂ ಸದಸ್ಯ ಅವಿನಾಶ್ ಕುಡ್ಚಿಲ, ಹಿಂದುಳಿದ ಬ್ಲಾಕ್ ಅಧ್ಯಕ್ಷ ಹರೀಶ್ ಕೋಟ್ಯಾನ್, ಸತೀಶ್ ಶೆಟ್ಟಿ ನೆಲ್ಲಿಕಟ್ಟೆ ವಲಯ ಅಧ್ಯಕ್ಷರು ನಿಡ್ಪಳ್ಳಿ, ಗ್ರಾಪಂ ಸದಸ್ಯೆ ಗ್ರೆಟ್ಟಾ ಜಿನೆಟ್, ತುಳಸಿ, ಮಾಜಿ ಗ್ರಾಪಂ ಸದಸ್ಯ ಗುಲಾಬಿ, ಬೂತ್ ಅಧ್ಯಕ್ಷ ಕಾರ್ತಿಕ್ ಆನಾಜೆ, ಡಿ ಎಲ್ ಪ್ರಸಾದ್ , ನಿರಂಜನ್, ವೆಂಕಪ್ಪ ನಾಯ್ಕ್ ಮಂಢೆಕೊಚ್ಚಿ, ದಯಾಮಣಿ ವಳಂಬೆ, ರಝಾಕ್ ತಂಬುತ್ತಡ್ಕ, ಹರೀಶ್‌ಪೂಜಾರಿ ಕುಕ್ಕುಪುಣಿ, ಶರೀಫ್ ವಿಜಯನಗರ, ಶರೀಫ್ ಕುಕ್ಕುಪುಣಿ, ಹರೀಶ್ ಕುಡ್ಚಿಲ, ಮಹಮ್ಮದ್ ಕರ್ನಪ್ಪಾಡಿ, ನಾಗೇಶ್ ಕುಡ್ಚಿಲ, ರಕ್ಷಿತ್ ಕುಡ್ಚಿಲ, ಅಬ್ದುಲ್ ಕುಂಞ ವಿಜಯನಗರ, ಪ್ರಾನ್ಸಿಸ್ ಡಿಸೋಜಾ ಕುಕ್ಕುಪುಣಿ, ಹಮೀದ್ ಹೊಸಮನೆ, ಪ್ರಕಾಶ್ ಡಿಸೋಜಾ ವಳಂಬೆ, ಸತೀಶ್ ರೈ ಮುಂಡೂರು, ಪ್ರಸಾದ್ ರೈ ಹೊಸಮನೆ, ಶರೀಫ್ ಕುಕ್ಕುಪುಣಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆಯ ಬಳಿಕ ಪಿಡಿಒ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಭಾಸ್ಕರ್ ಕರ್ಕೆರ ಸ್ವಾಗತಿಸಿ, ಸಿದ್ದಿಕ್ ತಂಬುತ್ತಡ್ಕ ವಂದಿಸಿದರು.