ವಿಟ್ಲ: ಮದುಮಗ ಕೊರಗಜ್ಜನ ವೇಷಧರಿಸಿ ಕುಣಿದ ವಿಚಾರವಾಗಿ ವಿಟ್ಲ ಪ್ರಖಂಡ ಭಜರಂಗದಳ ಮತ್ತು ವಿ.ಎಚ್.ಪಿ ಕಾರ್ಯಕರ್ತರು ಮಧುಮಗಳ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ.
ಸಾಲೆತ್ತೂರಿನಲ್ಲಿರುವ ಮದುಮಗಳ ಮನೆಯತ್ತ ಬಂದ ಕಾರ್ಯಕರ್ತರು ದಿಕ್ಕಾರ ಕೂಗಿದರು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು ಎಂದು ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಎರಡು ಕೋಮಿನ ಜನ ಜಮಾಯಿಸಿದ್ದು, ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿ ತಂದರು ಎಂದು ತಿಳಿದು ಬಂದಿದೆ.
ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ದಿನ ಈ ಘಟನೆ ನಡೆದಿದ್ದು, ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನ ಅಝೀಝ್ ಪುತ್ರಿಯ ವಿವಾಹ ಮಧ್ಯಾಹ್ನ ನಡೆದಿದ್ದು, ಅದೇ ದಿನ ರಾತ್ರಿ ಮುಸ್ಲಿಂ ಸಂಪ್ರದಾಯದಂತೆ ವರ ತನ್ನ 50ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ವಧುವಿನ ಮನೆಗೆ (ತಾಳ) ಆಗಮಿಸಿದ್ದಾನೆ. ತಡರಾತ್ರಿ ಆಗಮಿಸಿದ ವರನ ಬಳಗ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದು, ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜನ ವೇಷ ಭೂಷಣ ಧರಿಸಿ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿಕೊಂಡು ವರ ಆಗಮಿಸಿದ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವಂತಿದೆ ಎಂದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.