ಪುತ್ತೂರು: ಮುಸ್ಲಿಂ ಸಮುದಾಯದ ಮದುವೆ ಕಾರ್ಯಕ್ರಮದಲ್ಲಿ ಮದುಮಗ ಕೊರಗಜ್ಜನ ಮಾದರಿಯ ವೇಷ ಧರಿಸಿ ಕುಣಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದ್ದು ಮದುಮಗ ಹಾಗೂ ಆತನ ಜೊತೆಗಿದ್ದವರ ವಿರುದ್ಧ ಮುಸ್ಲಿಂ ಸಮುದಾಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕೊಳ್ನಾಡು ಗ್ರಾಮದ ವ್ಯಕ್ತಿಯೋರ್ವರ ಪುತ್ರಿಯ ಮದುವೆ ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಯುವಕನ ಜೊತೆ ನಡೆದಿತ್ತು. ಮದುವೆ ದಿನ ರಾತ್ರಿ ವರ ತನ್ನ ಸ್ನೇಹಿತರೊಂದಿಗೆ ವಧುವಿನ ಮನೆಗೆ ಔತನಕ್ಕೆ ಆಗಮಿಸಿದ್ದು ಈ ವೇಳೆ ವರನ ಗೆಳೆಯರು ವರನನ್ನು ಅಡಿಕೆ ಹಾಳೆಯ ಟೋಪಿ ಹಾಕಿ ಮೆರವಣಿಗೆಯಲ್ಲಿ ಕರೆ ತಂದಿದ್ದರು. ಬಳಿಕ ಕೊರಗಜ್ಜನನ್ನು ಹೋಲುವ ವೇಷ ಧರಿಸಿ ಕುಣಿದ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಈ ಘಟನೆ ನಾಗರಿಕ ಸಮಾಜದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮುಸ್ಲಿಂ ಧರ್ಮಗುರುಗಳು ಈ ಬಗ್ಗೆ ಕೆಂಡಾಮಂಡಲವಾಗಿದ್ದು, ಇದು ಮುಸ್ಲಿಂ ಸಮುದಾಯದ ಪವಿತ್ರ ಮದುವೆ ಕಾರ್ಯವನ್ನು ವಿಡಂಬನೆ ಮಾಡುವುದರ ಜೊತೆಗೆ ಅನ್ಯಸಮುದಾಯದವರ ಆರಾಧ್ಯದೈವವನ್ನು ಅವಹೇಳಿಸಲಾಗಿದೆ. ಇದನ್ನು ಮುಸ್ಲಿಂ ಸಮುದಾಯ ಒಪ್ಪಲು ಸಾಧ್ಯವೇ ಇಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಹಲವು ಧರ್ಮಗುರುಗಳು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಘಟನೆಯನ್ನು ಟೀಕಿಸಿದ್ದಾರೆ. ಕಲ್ಲೇಗ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಅವರು ಜ.7 ರಂದು ಶುಕ್ರವಾರದ ವಿಶೇಷ ನಮಾಜ್ ಬಳಿಕ ಈ ಬಗ್ಗೆ ಪ್ರಭಾಷಣ ನಡೆಸಿದ್ದು, ಉಪ್ಪಳದ ವರ ಮತ್ತು ಆತನಿಗೆ ಸಹಕಾರ ನೀಡಿದ ಗೆಳೆಯರ ಮದುವೆ ವೇಷ ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇಂತಹ ವೇಷದ ಮೂಲಕ ಆ ಮದುಮಗ ಸಮಾಜಕ್ಕೆ ನೀಡುವ ಸಂದೇಶವೇನು ಎಂದು ಪ್ರಶ್ನಿಸಿದ ಅವರು ಇಂತಹ ಘಟನೆಗಳಿಂದಾಗಿ ಮುಸ್ಲಿಂ ಸಮುದಾಯ ಮಾತ್ರವಲ್ಲದೇ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ ಎಂದು ಹೇಳಿದರು. ಈ ಘಟನೆಯನ್ನು ವಿವಿಧ ಮುಸ್ಲಿಂ ಸಂಘಟನೆಗಳು, ಧಾರ್ಮಿಕ ನಾಯಕರು ಕೂಡಾ ಖಂಡಿಸಿದ್ದಾರೆ.