ಪುತ್ತೂರು: ಕಳೆದ ಹಲವಾರು ಸಮಯಗಳಿಂದ ಹಿಂದೂಗಳ ಆರಾಧ್ಯ ದೈವ ದೇವರನ್ನು ಅಪಹಾಸ್ಯ ಮಾಡುವುದು, ನಿಂದನೆ ಮಾಡುವುದು, ಅಶ್ಲೀಲ ಚಿತ್ರಗಳನ್ನು ಬಿಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚುವುದು, ಪವಿತ ನಾಗನ ಕ್ಷೇತ್ರಗಳನ್ನು ಅಪವಿತ್ರಗೊಳಿಸುವುದು, ದೇವಸ್ಥಾನ, ದೈವಸ್ಥಾನ, ಭಜನಾಮಂದಿರಗಳ ಕಾಣಿಕೆ ಡಬ್ಬಿಗಳಿಗೆ ಬೇಡದ ವಸ್ತುಗಳನ್ನು ಹಾಕಿ ಅಪವಿತ್ರಗೊಳಿಸುವುದು, ಮುಂದುವರಿದ ಭಾಗವಾಗಿ ಸ್ವಾಮಿ ಕೊರಗಜ್ಜನ ವೇಷ ಹಾಕಿ ವಿಚಿತ್ರವಾಗಿ ಕುಣಿದು ವಿಕೃತ ಸಂತೋಷ ಪಡುವ ಈ ಎಲ್ಲಾ ಘಟನೆಗಳು ಲಕ್ಷಾಂತರ ಹಿಂದೂಗಳ ಮನಸ್ಸಿಗೆ ನೋವನುಂಟು ಮಾಡಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಎಲ್ಲಾ ಕೃತ್ಯಗಳನ್ನು ಖಂಡಿಸಿ ದೈವ ದೇವರುಗಳ ಮೊರೆ ಹೋಗಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯಬಾರದು ಮತ್ತು ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ವಿಶ್ವ ಹಿಂದೂ ಪರಿಷತ್ ಸಾಮೂಹಿಕ ಪ್ರಾರ್ಥನೆಗೆ ಕರೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಎಲ್ಲಾ ದೈವಸ್ಥಾನ, ದೇವಸ್ಥಾನ, ಭಜನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಜ.11 ರಂದು ನಡೆಸಲು ಸಮಸ್ತ ಹಿಂದೂ ಬಂಧುಗಳಲ್ಲಿ ವಿಶ್ವ ಹಿಂದೂ ಪರಿಷತ್ ವಿನಂತಿಸಿದೆ.
ದೈವಸ್ಥಾನ, ದೇವಸ್ಥಾನದ ಆಡಳಿತ ಮಂಡಳಿ, ಧಾರ್ಮಿಕ ಮುಖಂಡರು, ಸಂಘಟನೆಗಳು, ಸಂಘ ಸಂಸ್ಥೆಗಳು, ಭಕ್ತರು, ಸಮಸ್ತ ಹಿಂದೂಗಳು ಒಟ್ಟು ಸೇರಿ ನಮ್ಮ ನಮ್ಮ ಊರುಗಳ ದೈವಸ್ಥಾನ ದೇವಸ್ಥಾನ, ಭಜನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಬೇಕೆಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.