ಮಂಗಳೂರು: ಕೋವಿಡ್ ಹೆಚ್ಚಳ ಹಿನ್ನೆಲೆ ರಾಜ್ಯ ಸರ್ಕಾರ ವಿಧಿಸಿದ್ದ ಎರಡನೇ ವೀಕೆಂಡ್ ಕರ್ಫ್ಯೂ ನಿನ್ನೆ ರಾತ್ರಿಯಿಂದ ಆರಂಭವಾಗಿದ್ದು, ಇಂದು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ವಾಹನ ಸಂಚಾರ ವಿರಳವಾಗಿದ್ದು, ಜನ ಸಂಚಾರ ಕಡಿಮೆಯಿದೆ. ನಿನ್ನೆ ರಾತ್ರಿಯಿಂದಲೇ ಎಲ್ಲೆಡೆ ಪೊಲೀಸರು ಅನಗತ್ಯ ರಸ್ತೆಗಿಳಿಯದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಳಗ್ಗೆಯಿಂದಲೇ ನಗರದಲ್ಲಿ ದಿನಸಿ ಅಂಗಡಿ ಬಿಟ್ಟು ಉಳಿದೆಲ್ಲವೂ ಬಂದ್ ಆಗಿದೆ. ಬಸ್ ಸಂಚಾರ ವಿರಳವಾಗಿದೆ. ಹೊಟೇಲ್‌ಗಳಲ್ಲಿ ತಿಂಡಿ-ತಿನಿಸುಗಳನ್ನು ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ.
ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ವಹಿಸಿದ್ದಾರೆ. ಇದರ ಜೊತೆಗೆ ಸಂಚಾರಿ ಪೊಲೀಸರು ಬಸ್‌ಗಳಿಗೆ ಹತ್ತಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು. ಈ ವೀಕೆಂಡ್ ಕರ್ಫ್ಯೂ ಸೋಮವಾರ ಬೆಳಗಿನ ಜಾವ ಐದು ಗಂಟೆಯವರೆಗೆ ಇರಲಿದೆ.
ವೀಕೆಂಡ್ ಕರ್ಪ್ಯೂ ಅವಧಿಯಲ್ಲಿ (ಶನಿವಾರ ಮತ್ತು ರವಿವಾರ) ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಒಳಾಂಗಣದಲ್ಲಿ 100 ಮತ್ತು ಹೊರಾಂಗಣದಲ್ಲಿ 200 ಮಂದಿಗೆ ಅವಕಾಶ ಕಲ್ಪಿಸಲಾಗಿದೆ.
ಪೂರ್ವನಿಗದಿತ ಹರಕೆ ಯಕ್ಷಗಾನ, ಯಕ್ಷಗಾನ, ದೇವ- ದೈವಾರಾಧನೆಯನ್ನು 100 ಮಂದಿಗೆ ಸೀಮಿತಗೊಳಿಸಿ ಕಾರ್ಯಕ್ರಮವಾಗಿ ನಡೆಸಬಹುದಾಗಿದೆ. ಸಾರ್ವಜನಿಕ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲಾಗಿದ್ದು, ಇತರ ಯಾವುದೇ ಕಾರ್ಯಕ್ರಮಗಳಿಗೆ ರಿಯಾಯಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.



























