ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್ (Ali Akbar) ಅವರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಕೆಲವೇ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಆ ಮಾತಿನಂತೆಯೇ ಅವರೀಗ ನಡೆದುಕೊಂಡಿದ್ದಾರೆ. ಅಧಿಕೃತವಾಗಿ ಹಿಂದೂ (Hinduism) ಧರ್ಮಕ್ಕೆ ಅವರು ಕನ್ವರ್ಟ್ ಆಗಿದ್ದಾರೆ. ಕೆಲವು ಮುಸ್ಲಿಮರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರ ಆದ ಬಳಿಕ ಅವರ ಹೆಸರನ್ನೂ ಬದಲಾಯಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಮತಾಂತರದ (Conversion) ಸಂದರ್ಭದಲ್ಲಿ ತೆಗೆದ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನಿರ್ದೇಶಕ ಅಲಿ ಅಕ್ಬರ್ ಅವರ ಈ ನಿರ್ಧಾರದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಈ ಮತಾಂತರಕ್ಕೆ ಬಲವಾದ ಕಾರಣ ಇದೆ. ಆ ಬಗ್ಗೆ ಅಲಿ ಅಕ್ಬರ್ ಅವರು ಈ ಮೊದಲೇ ಸ್ಪಷ್ಟವಾಗಿ ಮಾತನಾಡಿದ್ದರು.
ಜ.13ರಂದು ಈ ಮತಾಂತರ ನಡೆದಿದೆ ಎನ್ನಲಾಗಿದೆ. ಹಿಂದೂ ಸೇವಾ ಕೇಂದ್ರದ ಸ್ಥಾಪಕ ಪ್ರತೀಶ್ ವಿಶ್ವನಾಥ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಅವರು, ‘ಇತಿಹಾಸ ತಾನಾಗಿಯೇ ಮರುಕಳಿಸುತ್ತದೆ. ಅಲಿ ಅಕ್ಬರ್ ಈಗ ರಾಮಸಿಂಹನ್’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಅಂದರೆ ಹಿಂದೂ ಧರ್ಮಕ್ಕೆ ಮತಾಂತರ ಆಗಿರುವ ಅಲಿ ಅಕ್ಬರ್ ಅವರು ರಾಮಸಿಂಹನ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ.
ಮತಾಂತರಕ್ಕೆ ಕಾರಣ ಏನು..?
ಅಲಿ ಅಕ್ಬರ್ ಅವರು ಹಿಂದೂ ಧರ್ಮಕ್ಕೆ ಮತಾಂತರ ಆಗಲು ಕಾರಣ ಏನೆಂಬುದನ್ನು ಈ ಹಿಂದೆಯೇ ತಿಳಿಸಿದ್ದರು. ‘ನಾನು ಮತ್ತು ನನ್ನ ಹೆಂಡತಿ ಹಿಂದೂ ಧರ್ಮಕ್ಕೆ ಮತಾಂತರ ಆಗುತ್ತೇವೆ. ಇನ್ನೆಂದೂ ನಾವು ಮುಸ್ಲಿಮರಾಗಿ ಮುಂದುವರಿಯುವುದಿಲ್ಲ’ ಎಂದು ಅವರು ಹೇಳಿದ್ದರು. ಮಿಲಿಟರಿ ಅಧಿಕಾರಿ ಬಿಪಿನ್ ರಾವತ್ ನಿಧನಕ್ಕೆ ಸಂಬಂಧಿಸಿದ ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಗೆ ಕೆಲವು ಮುಸ್ಲಿಮರು ಖುಷಿಯ ಎಮೋಜಿಗಳನ್ನು ಕಮೆಂಟ್ ಮಾಡಿದ್ದನ್ನು ಖಂಡಿಸಿ ಅಲಿ ಅಕ್ಬರ್ ಅವರು ಈ ನಿರ್ಧಾರ ತೆಗೆದುಕೊಂಡರು. ಮುಸ್ಲಿಂ ಧರ್ಮದಲ್ಲಿನ ನಂಬಿಕೆಗಳನ್ನು ಕೈ ಬಿಡುವುದಾಗಿ ಅವರು ತಿಳಿಸಿದ್ದರು.
ಬಿಪಿನ್ ರಾವತ್ ಅವರ ಸಾವಿಗೆ ಅಗೌರವ ಸೂಚಿಸಿದ ದೇಶವಿರೋಧಿ ಮುಸ್ಲಿಮರ ಕೃತ್ಯವನ್ನು ಯಾವುದೇ ಮುಸ್ಲಿಂ ನಾಯಕರೂ ಖಂಡಿಸಿಲ್ಲ. ಹಾಗಾಗಿ ಈ ಧರ್ಮದ ಬಗ್ಗೆ ತಮಗೆ ನಂಬಿಕೆ ಉಳಿದಿಲ್ಲ ಎಂದು ಅಲಿ ಅಕ್ಬರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಫೇಸ್ಬುಕ್ನಲ್ಲಿ ಅವರು ಹಂಚಿಕೊಂಡ ವಿಡಿಯೋ ಸಖತ್ ವೈರಲ್ ಆಗಿತ್ತು.