ತುಳು ಮತ್ತು ಕನ್ನಡದಲ್ಲಿ ತಯಾರಾಗುತ್ತಿರುವ ಬಹುನಿರೀಕ್ಷಿತ ಬನ ಚಿತ್ರದ ಕೆನಡಾ ಪ್ರೀಮಿಯರ್ ಶೋ ಪೋಸ್ಟರ್ ಬಿಡುಗಡೆಯಾಗಿ ಸಿನಿಪ್ರಿಯರು ಹಾಗೂ ಗೇಮಿಂಗ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ.
ಬಿಡುಗಡೆಯಾದ ಪೋಸ್ಟರ್‌ನಲ್ಲಿ ಬೈಕ್ ಸವಾರನೊಬ್ಬ “ರೈ ಸ್ಟಾರ್” ಟಿ-ಶರ್ಟ್ ಧರಿಸಿರುವ ದೃಶ್ಯ ಕಾಣಿಸಿಕೊಂಡಿದ್ದು, ಇದೇ ಈಗ ಚರ್ಚೆಯ ಕೇಂದ್ರವಾಗಿದೆ. ಫ್ರೀ ಫೈರ್ ಲೋಕದ ಜನಪ್ರಿಯ ಆಟಗಾರ ರೈ ಸ್ಟಾರ್ ಇದುವರೆಗೂ ಸಾರ್ವಜನಿಕವಾಗಿ ತಮ್ಮ ಮುಖವನ್ನು ಬಹಿರಂಗಪಡಿಸದ ಹಿನ್ನೆಲೆ, ಈ ಚಿತ್ರದ ಮೂಲಕವೇ ಅವರು ಮೊದಲ ಬಾರಿಗೆ ಫೇಸ್ ರಿವೀಲ್ ಮಾಡಬಹುದೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಚಿತ್ರವು ಆಗಸ್ಟ್ ತಿಂಗಳಲ್ಲಿ ಕೆನಡಾ ಮತ್ತು ಬ್ಯಾಂಕಾಕ್‌ನಲ್ಲಿ ಪ್ರೀಮಿಯರ್ ಪ್ರದರ್ಶನ ಕಾಣಲಿದ್ದು, ಭಾರತದಲ್ಲಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಚಿತ್ರವನ್ನು ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನ ಮಾಡಿದ್ದು, ಇವರು ಈ ಹಿಂದೆ “ಧರ್ಮ ದೈವ” ಹಾಗೂ “ಧರ್ಮ ಚಾವಡಿ” ಮೂಲಕ ಗಮನ ಸೆಳೆದಿದ್ದರು. ಈಶಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮನೋಹರ್ ರೈ ವೈಪಾಲ ನಿರ್ಮಾಣ ಮಾಡಿದ್ದಾರೆ.
ಸುದ್ದಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಜಯಪ್ರಕಾಶ್ ಶೆಟ್ಟಿ ಉಪ್ಪಳ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ಒಟ್ಟಾರೆ, “ಬನ” ಚಿತ್ರದ ಪೋಸ್ಟರ್ ಈಗಾಗಲೇ ಸಿನಿರಂಗ ಹಾಗೂ ಗೇಮಿಂಗ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ರೈ ಸ್ಟಾರ್ ನಿಜವಾಗಿಯೂ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಎಂಬುದಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.



























