ಖ್ಯಾತ ಹಿರಿಯ ನಟ ಪ್ರದೀಪ್ ರಾವತ್ ಅವರು ಆಗಸ್ಟ್ 4ರ ಸಂಜೆ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
‘ಲಗಾನ್’ ‘ಘಜಿನಿ’ ಮುಂತಾದ ಜನಪ್ರಿಯ ಸಿನಿಮಾ ಹಾಗೂ ‘ಮಹಾಭಾರತ’ ರೀತಿಯ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು, ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು.
ಪ್ರದೀಪ್ ರಾವತ್ ನಿಧನರಾದ ಸುದ್ದಿಯನ್ನು ಅವರ ಸಹನಟ ಯಶ್‌ಪಾಲ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಿಂದಿ, ಕನ್ನಡ, ತೆಲುಗು, ತಮಿಳು ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳು ಪ್ರದೀಪ್ ರಾವತ್ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.
ವರದಿಗಳ ಪ್ರಕಾರ, ಪ್ರದೀಪ್ ರಾವತ್ ಅವರು ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರ ಆರೋಗ್ಯ ಸ್ಥಿತಿ ಏಕಾಏಕಿ ಕ್ಷೀಣಿಸಿ ಕೊನೆಯುಸಿರೆಳೆದರು. ನೈಜ ಜೀವನದಲ್ಲಿ ಅತ್ಯಂತ ಶಾಂತ ಹಾಗೂ ಸೌಮ್ಯ ಸ್ವಭಾವದವರಾಗಿದ್ದ ಪ್ರದೀಪ್ ರಾವತ್ ಅವರ ಅಗಲಿಕೆಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕೂಡ ಪ್ರದೀಪ್ ರಾವತ್ ಅವರಿಗೆ ಬೇಡಿಕೆ ಇತ್ತು. ಖಳನಾಯಕನಾಗಿ ಅವರು ಸ್ಯಾಂಡಲ್ವುಡ್ನಲ್ಲಿ ಅಬ್ಬರಿಸಿದ್ದರು. ಉಪೇಂದ್ರ ನಟನೆಯ ‘ಪರೋಡಿ’, ದರ್ಶನ್ ನಟನೆಯ ‘ಗಜ’, ‘ಅಭಯ್’, ಕಿಚ್ಚ ಸುದೀಪ್ ನಟನೆಯ ‘ಬಚ್ಚನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರದೀಪ್ ರಾವತ್ ಅವರು ಅಭಿನಯಿಸಿದ್ದರು. ಬೆಂಗಾಲಿ, ಮರಾಠಿ, ಭೋಜ್ಪುರಿ, ನೇಪಾಳಿ ಭಾಷೆಯ ಸಿನಿಮಾಗಳಲ್ಲಿ ಸಹ ಅವರು ನಟಿಸಿದ್ದರು.




























