ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಂದಳಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವಕೇಸರಿ ಅಬೀರಿ-ಅತಿಕಾರಬೈಲು (ರಿ.) ಸಂಘಟನೆಯ ಸಾಮಾಜಿಕ ಸೇವೆಯನ್ನು ಗುರುತಿಸಿ, ಮಜ್ಜಾರಡ್ಕದ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಷ್ಣು ಯುವಶಕ್ತಿ ಬಳಗವು ತನ್ನ 9ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಿದೆ.
2015ರ ನವೆಂಬರ್ 15ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತನೆಯೊಂದಿಗೆ ಸ್ಥಾಪನೆಯಾದ ಯುವಕೇಸರಿ ಸಂಘಟನೆ ಪ್ರಸ್ತುತ 12ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಕಳೆದ ಒಂಬತ್ತು ವರ್ಷಗಳಿಂದ ಸಂಘಟನೆಯ ಸದಸ್ಯರು ತಮ್ಮ ಒಂದು ದಿನದ ವೇತನ ಹಾಗೂ ದಾನಿಗಳ ನೆರವಿನಿಂದ ‘ದತ್ತಿನಿಧಿ’ ಯೋಜನೆಯ ಮೂಲಕ ಬಡ ಮತ್ತು ಅನಾರೋಗ್ಯ ಪೀಡಿತರಿಗೆ ನೆರವು ನೀಡುತ್ತಿದ್ದಾರೆ.
ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು 10 ಸಾವಿರ ರೂ. ಹಾಗೂ ದೈನಂದಿನ ಖರ್ಚಿಗಾಗಿ 52 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಈವರೆಗೆ ಒಟ್ಟು 10,62,530 ರೂ. ಹಾಗೂ 2,856 ಕೆ.ಜಿ. ಅಕ್ಕಿಯನ್ನು ವಿತರಿಸಲಾಗಿದೆ.
ಸಂಘಟನೆಯು ಚಂದಳಿಕೆಯಲ್ಲಿ ಸುಮಾರು 3.50 ಲಕ್ಷ ರೂ. ವೆಚ್ಚದಲ್ಲಿ ಕಾರ್ಯಾಲಯ ನಿರ್ಮಿಸಿದ್ದು, 60 ಸಾವಿರ ರೂ. ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣವನ್ನೂ ಸ್ಥಾಪಿಸಿದೆ. ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡುವ ಮೂಲಕವೂ ಸೇವೆ ಸಲ್ಲಿಸುತ್ತಿದೆ. ಸಂಘಟನೆಯ 10ಕ್ಕೂ ಹೆಚ್ಚು ಸದಸ್ಯರು ತಲಾ 15ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ್ದಾರೆ.
ಮಡಿಕೇರಿಯಲ್ಲಿ ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ 20 ಸಾವಿರ ರೂ. ಮೌಲ್ಯದ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿತ್ತು. ಚಂದಳಿಕೆ ಶಾಲೆಯಲ್ಲಿ ಸಂಘಟನೆಯ ವಾರ್ಷಿಕೋತ್ಸವದ ಅಂಗವಾಗಿ ಪ್ರತಿ ವರ್ಷ ಮ್ಯಾಟ್ ಕಬಡ್ಡಿ, ಯಕ್ಷಗಾನ ಹಾಗೂ ನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಸಂಘಟನೆಯ ಈ ಸೇವಾ ಕಾರ್ಯಗಳನ್ನು ಗುರುತಿಸಿ 2024ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಪ್ರಸ್ತುತ ಸಂಘಟನೆಯ ಅಧ್ಯಕ್ಷರಾಗಿ ಶಶಿ ಕೇಪುಳಗುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಪೂಜಾರಿ ಪಟ್ಲ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಭರತ್ ಜೋಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಸಂಘಟನೆಯ ಗೌರವಾಧ್ಯಕ್ಷರಾಗಿದ್ದಾರೆ.


























