ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುದ್ಮಾರು ಗ್ರಾಮದ ಯುವ ಕ್ರೀಡಾಪಟು ಶ್ರೇಯಸ್ ಶೆಣವ ಅವರು ಪ್ರತಿಷ್ಠಿತ 2026 IWWF World Cable Wakeboard Championshipನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಚೀನಾದ ಬೀಜಿಂಗ್‌ನಲ್ಲಿ ಆಗಸ್ಟ್ 8ರಿಂದ 15ರವರೆಗೆ ನಡೆಯಲಿರುವ ವಿಶ್ವಮಟ್ಟದ ಈ ಚಾಂಪಿಯನ್‌ಶಿಪ್‌ಗೆ ದೇಶದಾದ್ಯಂತದಿಂದ ಕೇವಲ ಮೂರು ಮಂದಿ ಭಾರತೀಯ ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಅವರಲ್ಲಿ ಶ್ರೇಯಸ್ ಶೆಣವ ಒಬ್ಬರಾಗಿದ್ದಾರೆ.
ಪುತ್ತೂರಿನ ಶಾಂತಿಮೊಗರು ಸೇತುವೆ ಸಮೀಪದ ರಿವರ್ ಕ್ವೀನ್ ಕಫೆ ಮಾಲೀಕರಾಗಿರುವ ಶ್ರೇಯಸ್, ಸಾಹಸ ಜಲಕ್ರೀಡೆಯಾದ ಕೇಬಲ್ ವೇಕ್‌ಬೋರ್ಡ್ನಲ್ಲಿ ತಮ್ಮ ಸಾಧನೆಯ ಮೂಲಕ ಈ ಅಪೂರ್ವ ಅವಕಾಶ ಪಡೆದಿದ್ದಾರೆ. ವಿಶ್ವದ ವಿವಿಧ ರಾಷ್ಟ್ರಗಳ ಶ್ರೇಷ್ಠ ಕ್ರೀಡಾಪಟುಗಳು ಭಾಗವಹಿಸುವ ಈ ಚಾಂಪಿಯನ್‌ಶಿಪ್ ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಮಹತ್ವದ ವೇದಿಕೆಯಾಗಿದ್ದು, ಭಾರತದ ಪ್ರತಿಭೆಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಅವಕಾಶವೂ ಆಗಿದೆ.
ಶ್ರೇಯಸ್ ಅವರು ದಿವಂಗತ ಪ್ರಭಾಚಂದ್ರ ಶೆಣವ ಅವರ ಪುತ್ರ ಹಾಗೂ ಮೋಹಿನಿ ಪಿ. ಶೆಣವ ಅವರ ಮಗ. ಅವರ ಈ ಸಾಧನೆ ಪುತ್ತೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿದೆ.
ಶ್ರೇಯಸ್ ಶೆಣವ ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತಂದುಕೊಡಲಿ ಎಂದು ಸ್ಥಳೀಯರು ಹಾಗೂ ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.




























