ಧರ್ಮಸ್ಥಳ: ರಾಕಿಂಗ್ ಸ್ಟಾರ್ ಯಶ್ ಅವರು ಆ. 25ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಧರ್ಮಸ್ಥಳಕ್ಕೆ ಆಗಮಿಸಿದ ಯಶ್ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಅವರನ್ನು ಭೇಟಿಯಾದರು. ಈ ವೇಳೆ ಯಶ್ ಅವರು ಅವರಿಂದ ಆಶೀರ್ವಾದ ಪಡೆದರು.
ಬಳಿಕ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿದ ಯಶ್, ಗರ್ಭಗುಡಿಯ ಸಮೀಪ ನಿಂತು ಸುಮಾರು 15 ನಿಮಿಷಗಳ ಕಾಲ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಮ್ಮ ಮುಂಬರುವ ‘ಟಾಕ್ಸಿಕ್’ ಚಿತ್ರದ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದ ಅವರು, ಬಳಿಕ ಮಹಾ ಮಂಗಳಾರತಿಯನ್ನು ಸ್ವೀಕರಿಸಿದರು.
ಯಶ್ ಅವರ ಧರ್ಮಸ್ಥಳ ಭೇಟಿಯ ಸುದ್ದಿ ತಿಳಿದು ದೇವಸ್ಥಾನದ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.





























